ಯಾದಗಿರಿ: ಬಟ್ಟೆ ಒಗೆಯಲು ಹೋಗಿದ್ದಾಗ ಕ್ವಾರಿಯಲ್ಲಿದ್ದ ನೀರಿಗೆ ಇಬ್ಬರು ಬಾಲಕಿಯರು ಸೇರಿ ಮೂವರು ಸಾವನ್ನಪ್ಪಿದ್ದಾರೆ.
ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಬಸವನಗರ ಬಳಿ ಘಟನೆ ನಡೆದಿದೆ. ಗುಂಡಮ್ಮ(35), ಸುಜಾತಾ(11), ಶಿವಕಾಂತಾ(9) ಮೃತಪಟ್ಟವರು ಎಂದು ಹೇಳಲಾಗಿದೆ. ಬಟ್ಟೆ ಒಗೆಯಲು ತೆರಳಿದ್ದಾಗ ಕ್ವಾರಿಯಲ್ಲಿದ್ದ ನೀರಿಗೆ ಇಬ್ಬರು ಬಾಲಕಿಯರು ಬಿದ್ದಿದ್ದಾರೆ. ಸುಜಾತಾ ಮತ್ತು ಶಿವಕಾಂತಾ ರಕ್ಷಣೆಗೆ ಗುಂಡಮ್ಮ ತನ್ನದೇ ಸೀರೆಯನ್ನು ಕೊಟ್ಟಿದ್ದಾರೆ. ನೀರಿನಿಂದ ಮೇಲೆ ಬರುವ ಧಾವಂತದಲ್ಲಿ ಬಾಲಕಿಯರು ಸೀರೆಯನ್ನು ಎಳೆದಿದ್ದಾರೆ. ಬಾಲಕಿಯರು ಸೀರೆ ಎಳೆದ ರಭಸಕ್ಕೆ ಗುಂಡಮ್ಮ ಕೂಡ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಕ್ವಾರಿಯ ನೀರಿಗೆ ಬಿದ್ದು ಸುಜಾತಾ ಮತ್ತು ಶಿವಕಾಂತಾ ಅವರೊಂದಿಗೆ ಗುಂಡಮ್ಮ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ವಡಗೇರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

