ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್ ಇದೇ ತಿಂಗಳ 26ರಂದು ತೆರೆಗೆ ಬರಲಿದ್ದು, ಸದ್ಯ ಎಲ್ಲೆಡೆ ಈ ಚಿತ್ರದ್ದೇ ಹವಾ ಎದ್ದಿದೆ. ಕೆಜಿಎಫ್ ಚಿತ್ರ ಸರಣಿಯ ಯಶಸ್ಸಿನ ಬಳಿಕ ಬಿಡುಗಡೆಯಾಗುತ್ತಿರುವ ಈ ಚಿತ್ರ ಕೇವಲ ಪ್ಯಾನ್ ಇಂಡಿಯಾ ಚಿತ್ರವಾಗಿರದೇ ಇಂಗ್ಲಿಷ್ ಭಾಷೆಗೂ ಸಹ ಡಬ್ ಆಗಿ ತೆರೆ ಕಾಣುತ್ತಿದೆ.
ಇನ್ನು ಚಿತ್ರದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ತೆರೆಯಲ್ಪಟ್ಟಿದ್ದು, ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಬರತೊಡಗಿದೆ. ಬಿಡುಗಡೆ ಸಮೀಪಿಸುತ್ತಿದ್ದಂತೆ ವಿವಿಧ ಸಂದರ್ಶನಗಳಲ್ಲಿ ಭಾಗವಹಿಸುತ್ತಿರುವ ಯಶ್ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದು, ಚಿತ್ರತಂಡ ಬೆಂಗಳೂರಿನ ಬಳಿಕ ಇದೀಗ ಹೈದರಾಬಾದ್‌ನಲ್ಲೂ ಪ್ರಿ ರಿಲೀಸ್ ಇವೆಂಟ್ ಆಯೋಜಿಸಿದೆ.
ನಿನ್ನೆ ( ಆಗಸ್ಟ್ 22 ) ಹೈದರಾಬಾದ್‌ನ ಮಲ್ಲಾರೆಡ್ಡಿ ಕಾಲೇಜಿನಲ್ಲಿ ಟಾಕ್ಸಿಕ್ ಪ್ರಿ ರಿಲೀಸ್ ಇವೆಂಟ್ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಯಶ್ ಸ್ಪೀಚ್ ಕೇಂದ್ರಬಿಂದುವಾಗಿತ್ತು. ಚಿತ್ರದ ಬಗ್ಗೆ ಹಾಗೂ ತೆಲುಗು ಚಿತ್ರರಂಗದ ಬಗ್ಗೆ ಮಾತನಾಡಿದ ಯಶ್ ತಮಗಿಷ್ಟದ ತೆಲುಗು ಸಿನಿಮಾಗಳು ಹಾಗೂ ಹಾಡುಗಳನ್ನು ಉಲ್ಲೇಖಿಸಿ ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡರು.
ಇನ್ನು ಕೆಜಿಎಫ್ ಬಳಿಕ ತೆಲುಗಿನಲ್ಲೂ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವ ಯಶ್ ಅವರನ್ನು ಕಾಣಲು ಅಪಾರವಾದ ಅಭಿಮಾನಿ ಬಳಗ ಜಮಾಯಿಸಿತ್ತು. ಕಿಕ್ಕಿರಿದು ತುಂಬಿದ್ದ ಜನ ಸಾಗರವನ್ನು ನಿಯಂತ್ರಿಸುವ ಹಾಗೂ ಯಾವುದೇ ಅನಾಹುತ ಸಂಭವಿಸದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಚಿತ್ರತಂಡದ ಮೇಲಿತ್ತು.
ಆದರೆ ಅಭಿಮಾನಿಗಳು ಸ್ಪೀಕರ್‌ಗಳ ಮೇಲೇರಿ ಯಶ್ ಅವರನ್ನು ನೋಡಲು ಮುಂದಾಗಿದ್ದು, ಈ ವೇಳೆ ಅಭಿಮಾನಿಗಳು ಕೆಳಗೆ ಬಿದ್ದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಯಶ್ ಒಮ್ಮೆಲೇ ಏಯ್ ಕೇರ್‌ಫುಲ್ ಎಂದು ಕಿರುಚಿ ಗಾಬರಿಯಾಗಿದ್ದಾರೆ. ಬಳಿಕ ಯಾರೂ ಮೇಲೇರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

