ನವದೆಹಲಿ: ದೇಶದ ರಾಷ್ಟ್ರೀಯ ಗೀತೆ ವಂದೇ ಮಾತರಂಗೆ ಕಾನೂನುಬದ್ಧ ರಕ್ಷಣೆ ಒದಗಿಸುವ ಉದ್ದೇಶದಿಂದ ತರಲಾದ ‘ರಾಷ್ಟ್ರೀಯ ಗೌರವ ಸಂರಕ್ಷಣಾ (ತಿದ್ದುಪಡಿ) ಮಸೂದೆ–2026’ ಅನ್ನು ರಾಜ್ಯಸಭೆ ಬುಧವಾರ ಅಂಗೀಕರಿಸಿದೆ.
ಈ ತಿದ್ದುಪಡಿಯೊಂದಿಗೆ ವಂದೇ ಮಾತರಂ ಅನ್ನು ಕೂಡ ರಾಷ್ಟ್ರೀಯ ಗೌರವ ಸಂರಕ್ಷಣಾ ಕಾಯ್ದೆ ವ್ಯಾಪ್ತಿಗೆ ತರಲಾಗಿದೆ. ಇದರ ಪ್ರಕಾರ, ರಾಷ್ಟ್ರೀಯ ಗೀತೆಯನ್ನು ಅವಮಾನಿಸುವುದು ಅಥವಾ ಅದನ್ನು ಹಾಡುವ ವೇಳೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವುದನ್ನು ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ.
ವಿಪಕ್ಷಗಳ ಪ್ರತಿಭಟನೆ ನಡುವೆ ಮಸೂದೆಗೆ ಅಂಗೀಕಾರ
ಮಸೂದೆ ಕುರಿತು ರಾಜ್ಯಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ವಿಪಕ್ಷ ಸದಸ್ಯರು ತೀವ್ರ ಪ್ರತಿಭಟನೆ ನಡೆಸಿದರು. ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಬಲಪ್ರಯೋಗ ಮಾಡಿದ್ದಾರೆ ಎಂದು ಆರೋಪಿಸಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರ ನೀಡಬೇಕೆಂದು ಒತ್ತಾಯಿಸಿದರು. ಗದ್ದಲದ ನಡುವೆಯೇ ವಿಪಕ್ಷಗಳು ಸಭೆಯಿಂದ ವಾಕ್ಔಟ್ ಮಾಡಿದರು.
3 ವರ್ಷಗಳವರೆಗೆ ಜೈಲು ಶಿಕ್ಷೆ
ಪ್ರಸ್ತುತ 1971ರ ರಾಷ್ಟ್ರೀಯ ಗೌರವ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ರಾಷ್ಟ್ರಧ್ವಜ, ಭಾರತೀಯ ಸಂವಿಧಾನ ಮತ್ತು ರಾಷ್ಟ್ರಗೀತೆ ‘ಜನ ಗಣ ಮನ’ಗಳಿಗೆ ಮಾತ್ರ ಕಾನೂನುಬದ್ಧ ರಕ್ಷಣೆ ಇದೆ.ಹೊಸ ತಿದ್ದುಪಡಿಯೊಂದಿಗೆ ‘ವಂದೇ ಮಾತರಂ’ ಕೂಡ ಇದೇ ಕಾಯ್ದೆಯ ವ್ಯಾಪ್ತಿಗೆ ಬಂದಿದೆ. ಹೊಸ ನಿಯಮಗಳ ಪ್ರಕಾರ, ರಾಷ್ಟ್ರೀಯ ಗೀತೆ ಅಥವಾ ರಾಷ್ಟ್ರೀಯ ಚಿಹ್ನೆಗಳನ್ನು ಅವಮಾನಿಸುವುದು, ವಿಕೃತಗೊಳಿಸುವುದು ಅಥವಾ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವಂತಹ ಕೃತ್ಯಗಳಿಗೆ ಗರಿಷ್ಠ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.
150ನೇ ವಾರ್ಷಿಕೋತ್ಸವದ ಅಂಗವಾಗಿ ತಿದ್ದುಪಡಿ
‘ವಂದೇ ಮಾತರಂ’ ಗೀತೆಯ 150ನೇ ವಾರ್ಷಿಕೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಈ ಮಹತ್ವದ ತಿದ್ದುಪಡಿಯನ್ನು ಪರಿಚಯಿಸಿದೆ. ಬಂಕಿಂಚಂದ್ರ ಚಟ್ಟೋಪಾಧ್ಯಾಯ ರಚಿಸಿದ ಈ ಗೀತೆಯನ್ನು ಅವರ ‘ಆನಂದಮಠ’ ಕಾದಂಬರಿಯಲ್ಲಿ ಸೇರಿಸಲಾಗಿತ್ತು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಈ ಗೀತೆ ಪ್ರಬಲ ರಾಷ್ಟ್ರಭಕ್ತಿ ಸಂಕೇತವಾಗಿ ಗುರುತಿಸಿಕೊಂಡಿದೆ.
ಆದರೆ, ಹೊಸ ಕಾಯ್ದೆಯಲ್ಲಿ ‘ಅವಮಾನ’ ಮತ್ತು ‘ಅಡ್ಡಿಪಡಿಸುವುದು’ ಎಂಬ ಪದಗಳಿಗೆ ನ್ಯಾಯಾಲಯಗಳು ಯಾವ ರೀತಿಯ ವ್ಯಾಖ್ಯಾನ ನೀಡುತ್ತವೆ ಹಾಗೂ ಗೀತೆ ಹಾಡುವಾಗ ಭಾಗವಹಿಸದೇ ಇರುವುದು ಮತ್ತು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವುದರ ನಡುವಿನ ವ್ಯತ್ಯಾಸದ ಕುರಿತು ಮುಂದಿನ ದಿನಗಳಲ್ಲಿ ವ್ಯಾಪಕ ಚರ್ಚೆಯಾಗುವ ಸಾಧ್ಯತೆಯಿದೆ.

