ಮನೆಯಲ್ಲಿ ಎಸಿ ಸ್ಫೋಟಗೊಂಡು ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಫರಿದಾಬಾದ್ನ ಗ್ರೀನ್ ಫೀಲ್ಡ್ ಕಾಲೋನಿಯಲ್ಲಿ ನಡೆದಿದೆ.
ಪಕ್ಕದ ಮನೆಯಲ್ಲಿ ಅಳವಡಿಸಲಾಗಿದ್ದ ಹವಾನಿಯಂತ್ರಣ ಯಂತ್ರಕ್ಕೆ ಬೆಂಕಿ ತಗುಲಿ ಸಿಡಿದು, ಮನೆ ಹೊಗೆಯಿಂದ ತುಂಬಿ ಉಸಿರುಗಟ್ಟಿಸಿ ಮೂವರು ಸದಸ್ಯರ ಕುಟುಂಬ ಮತ್ತು ಅವರ ಸಾಕು ನಾಯಿ ಸಾವನ್ನಪ್ಪಿದೆ. ಓರ್ವ ಕಟ್ಟಡದ ಕಿಟಕಿಯಿಂದ ಹಾರಿ ತನ್ನ ಜೀವವನ್ನು ಉಳಿಸಿಕೊಂಡಿದ್ದಾನೆ. ಆತನ ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಸಚಿನ್ ಕಪೂರ್, ಅವರ ಪತ್ನಿ ರಿಂಕು ಕಪೂರ್ ಮತ್ತು ಅವರ ಮಗಳು ಸುಜನ್ ಕಪೂರ್ ಎಂದು ಗುರುತಿಸಲಾಗಿದೆ. ಕುಟುಂಬವು ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ್ದು, ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಅವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾದ್ಶಾ ಖಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಇತ್ತೀಚಿನ ವರ್ಷಗಳಲ್ಲಿ ತಾಪಮಾನ ಹೆಚ್ಚಾದಂತೆ ಭಾರತದಲ್ಲಿ ಹವಾನಿಯಂತ್ರಣಗಳ ಬಳಕೆ ಹೆಚ್ಚಾಗಿದೆ. ಕಳೆದ ವರ್ಷ ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ನೀಡಿದ ವರದಿಯ ಪ್ರಕಾರ, ದೇಶವು ಎಸಿಗಳ ಮೇಲೆ ಹೆಚ್ಚುತ್ತಿರುವ ಅವಲಂಬನೆ ಮತ್ತು ಅದರಿಂದ ಉಂಟಾಗುವ ವಿದ್ಯುತ್ ಬಳಕೆ ಶೀಘ್ರದಲ್ಲೇ ಇತರ ಹಲವು ರಾಷ್ಟ್ರಗಳನ್ನು ಮೀರಿಸುತ್ತದೆ.
ಎಸಿ ಬಳಸುವ ಮುನ್ನ ಎಚ್ಚರ
ನೀವು ಮೊದಲ ಬಾರಿ ಎಸಿ ಬಳಸುತ್ತಿದ್ದರೆ ನಿಮ್ಮ ಆರೋಗ್ಯದಲ್ಲಿ ಸಮಸ್ಯೆಗಳು ಕಂಡು ಬಂದಾವು. ಶೀತ, ಕೆಮ್ಮು ಪದೇ ಪದೇ ಕಾಣಿಸಿಕೊಂಡೀತು. ನಮ್ಮ ದೇಹ ತಂಪಿಗೆ ಒಗ್ಗಿಕೊಳ್ಳುವುದರಿಂದ ನೀರು ಕುಡಿಯುವುದನ್ನು ನಾವು ಮರೆತೇ ಬಿಡುತ್ತೇವೆ. ಇದು ದೇಹದ ನಿರ್ಜಲೀಕರಣಕ್ಕೂ ಕಾರಣವಾದೀತು.
ಎಸಿ ರೂಮಿನಲ್ಲಿ ಕುಳಿತಾಗ ನೀವು ಮೈ ಕೈಗೆ ಎಷ್ಟೇ ಮಾಯಿಸ್ಚರೈಸರ್ ಹಚ್ಚಿದರೂ ಅದು ಮಾಯವಾಗಿ ತ್ವಚೆ ಒರಟಾಗುತ್ತದೆ. ಕೃತಕ ತಂಪನ್ನು ತ್ವಚೆ ಸ್ವೀಕರಿಸಲು ಒಪ್ಪುವುದಿಲ್ಲ. ಹೆಚ್ಚು ಹೊತ್ತು ಎಸಿಯಡಿ ಕುಳಿತುಕೊಳ್ಳುವ ಮಂದಿಗೆ ಸೂರ್ಯನ ಪ್ರಖರ ಕಿರಣಗಳನ್ನು ಸಹಿಸುವ ಶಕ್ತಿಯೂ ಇರುವುದಿಲ್ಲ. ಎಸಿಯ ಸೂಕ್ತ ನಿರ್ವಹಣೆ ನಡೆಯದಿದ್ದರೆ ಇದರಿಂದ ಅಲರ್ಜಿ ಅಥವಾ ಇತರ ಸೋಂಕುಗಳು ಕಾಣಿಸಿಕೊಂಡು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆಗಳಿವೆ.