ಕುರ್ಚಿಯಲ್ಲಿ ಕುಳಿತು ಪೋಸ್ ನೀಡುವುದು, ಬಿಸಿಬಿಸಿ ಕಾಫಿ ಕುಡಿಯುವುದು, ಫ್ರೆಶ್ ಆಗಲು ಸ್ನಾನ ಮಾಡುವುದು, ಬಳಿಕ ಬಾಲಿವುಡ್ ಮಾಸ್ ಹಾಡಿಗೆ ಹುಚ್ಚೆದ್ದು ಡ್ಯಾನ್ಸ್ ಮಾಡುವುದು.. ಇದೆಲ್ಲವೂ ಯಾವುದೋ ಐಷಾರಾಮಿ ಹೋಟೆಲ್ನಲ್ಲಿ ನಡೆದ ಘಟನೆ ಎಂದುಕೊಂಡರೆ ತಪ್ಪು. ವಾರಾಣಸಿಯಲ್ಲಿರುವ ಬೈಕ್ ಶೋರೂಮ್ನಲ್ಲಿ ಮಧ್ಯರಾತ್ರಿ ಓರ್ವ ಕಿಲಾಡಿ ಕಳ್ಳ ಮಾಡಿದ ಅವಾಂತರವಿದು. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳ್ಳತನ ಎಂದಾಕ್ಷಣ ಸಾಮಾನ್ಯವಾಗಿ ಕತ್ತಲಿನಲ್ಲಿ ಮುಖಕ್ಕೆ ಮಾಸ್ಕ್ ಧರಿಸಿಕೊಂಡು, ಸಿಕ್ಕಿಬೀಳುವ ಭಯದಲ್ಲಿ ಸದ್ದಿಲ್ಲದೆ ಕೆಲವೇ ಕ್ಷಣಗಳಲ್ಲಿ ವಸ್ತುಗಳನ್ನು ಕದ್ದು ಪರಾರಿಯಾಗುವುದನ್ನು ನೋಡುತ್ತೇವೆ. ಆದರೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದ ಈ ಕಳ್ಳತನದ ಘಟನೆ ನೋಡಿದರೆ ಪೊಲೀಸರೇ ಸೇರಿದಂತೆ ಯಾರಾದರೂ ಅಚ್ಚರಿಪಡಬೇಕಾಗುತ್ತದೆ. ಓರ್ವ ಕಳ್ಳ ಆಟೋಮೊಬೈಲ್ ಶೋರೂಮ್ನಲ್ಲಿ ಬರೋಬ್ಬರಿ ನಾಲ್ಕೂವರೆ ಗಂಟೆಗಳ ಕಾಲ ಠಿಕಾಣಿ ಹೂಡಿದ್ದಾನೆ. ಆರಾಮವಾಗಿ ಕಾಫಿ ಕುಡಿದಿದ್ದಾನೆ, ವಾಶ್ರೂಮ್ನಲ್ಲಿ ಸ್ನಾನ ಮಾಡಿದ್ದಾನೆ, ಹಾಡು ಹಾಕಿಕೊಂಡು ಲುಂಗಿ ಡ್ಯಾನ್ಸ್ ಕೂಡ ಮಾಡಿದ್ದಾನೆ. ಕೊನೆಗೆ ಶೋರೂಮ್ ಮ್ಯಾನೇಜರ್ಗೆ ಸೇರಿದ ₹4.71 ಲಕ್ಷ ಮೌಲ್ಯದ ಐಷಾರಾಮಿ KTM ಬೈಕ್ ಕದ್ದು ಪರಾರಿಯಾಗಿದ್ದಾನೆ.
4 ಗಂಟೆಗಳ ಮಸ್ತಿ: CCTVಯಲ್ಲಿಸೆರೆಯಾದ ದೃಶ್ಯಗಳು..
ವಾರಾಣಸಿಯ ಮಂಡುವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಶೋರೂಮ್ನಲ್ಲಿ ಈ ಘಟನೆ ನಡೆದಿದೆ. ಸೋಮವಾರ ರಾತ್ರಿ 10 ಗಂಟೆಗೆ ಸಿಬ್ಬಂದಿ ಶೋರೂಮ್ ಮುಚ್ಚಿ ತೆರಳಿದ ಬಳಿಕ, ರಾತ್ರಿ ಸುಮಾರು 11:30ರ ವೇಳೆಗೆ ಈ ಕಳ್ಳ ಒಳನುಗ್ಗಿದ್ದಾನೆ. ಗ್ಲಾಸ್ ಬಾಗಿಲನ್ನು ಕಟ್ಟರ್ನಿಂದ ಕತ್ತರಿಸಲು ಸುಮಾರು 36 ನಿಮಿಷಗಳ ಕಾಲ ಸಮಯ ತೆಗೆದುಕೊಂಡಿದ್ದಾನೆ. ಮಧ್ಯರಾತ್ರಿ 12:06ಕ್ಕೆ ಶೋರೂಮ್ನೊಳಗೆ ಪ್ರವೇಶಿಸಿದ್ದಾನೆ.
ಒಳಗೆ ಬಂದ ತಕ್ಷಣ ರಿಸೆಪ್ಷನ್ನಲ್ಲಿದ್ದ ಕಂಪ್ಯೂಟರ್ ಬಳಿಗೆ ತೆರಳಿ, ರಿವಾಲ್ವಿಂಗ್ ಕುರ್ಚಿಯಲ್ಲಿ ಕುಳಿತು ಕೆಲಕಾಲ ಸುತ್ತಾಡುತ್ತಾ ಎಂಜಾಯ್ ಮಾಡಿದ್ದಾನೆ. ಬಳಿಕ ಫ್ರಿಜ್ನಲ್ಲಿದ್ದ ತಣ್ಣೀರು ಕುಡಿದು, ವೆಂಡಿಂಗ್ ಮೆಷಿನ್ನಿಂದ ಬಿಸಿಬಿಸಿ ಕಾಫಿ ತೆಗೆದುಕೊಂಡು ಆರಾಮವಾಗಿ ಕುಡಿದಿದ್ದಾನೆ. ಅಷ್ಟಕ್ಕೇ ನಿಲ್ಲದೆ ವಾಶ್ರೂಮ್ಗೆ ತೆರಳಿ ಆರಾಮವಾಗಿ ಸ್ನಾನ ಮಾಡಿದ್ದಾನೆ.
ಸ್ನಾನ ಮಾಡಿದ ಬಳಿಕ ಒದ್ದೆಯಾದ ಬಟ್ಟೆಗಳನ್ನು ಒಂದು ಬೈಕ್ ಮೇಲೆ ಒಣಗಲು ಹಾಕಿದ್ದಾನೆ. ಅಲ್ಲಿದ್ದ ಹೊಸ ಬೈಕ್ನ ಕವರ್ವೊಂದನ್ನು ಹರಿದು ಅದನ್ನು ಲುಂಗಿಯಂತೆ ಕಟ್ಟಿಕೊಂಡಿದ್ದಾನೆ. ನಂತರ ಕಂಪ್ಯೂಟರ್ನಲ್ಲಿ ಹಾಡುಗಳನ್ನು ಹಾಕಿಕೊಂಡು ಲುಂಗಿ ಡ್ಯಾನ್ಸ್ ಮಾಡಿದ್ದಾನೆ. ಕೊನೆಗೆ ಬೆಳಗಿನ ಜಾವ ಸುಮಾರು 4 ಗಂಟೆಗೆ ಶೋರೂಮ್ನಿಂದ ಹೊರಡುವ ಮುನ್ನ ಅಲ್ಲಿನ ಬ್ರಾಂಡೆಡ್ ಟೀ ಶರ್ಟ್ ಮತ್ತು ಕ್ಯಾಪ್ ಧರಿಸಿದ್ದಾನೆ. ಬಳಿಕ ಶೋರೂಮ್ ಮ್ಯಾನೇಜರ್ಗೆ ಸೇರಿದ ₹4.71 ಲಕ್ಷ ಮೌಲ್ಯದ KTM ಬೈಕ್ ಏರಿ ಅಲ್ಲಿಂದ ಪರಾರಿಯಾಗಿದ್ದಾನೆ.

