HomeKarnataka'ಪಶ್ಚಾತಾಪಕ್ಕಿಂತ ದೊಡ್ಡ ಪ್ರಾಯಶ್ಚಿತ ಬೇರೊಂದಿಲ್ಲ : ಅರವಿಂದ್ ಬೆಲ್ಲದ್ ಕ್ಷಮೆಯಾಚನೆಗೆ 'CM ಸಿದ್ದರಾಮಯ್ಯ' ಪ್ರತಿಕ್ರಿಯೆ

‘ಪಶ್ಚಾತಾಪಕ್ಕಿಂತ ದೊಡ್ಡ ಪ್ರಾಯಶ್ಚಿತ ಬೇರೊಂದಿಲ್ಲ : ಅರವಿಂದ್ ಬೆಲ್ಲದ್ ಕ್ಷಮೆಯಾಚನೆಗೆ ‘CM ಸಿದ್ದರಾಮಯ್ಯ’ ಪ್ರತಿಕ್ರಿಯೆ

ಬೆಂಗಳೂರು : ಪಶ್ಚಾತಾಪಕ್ಕಿಂತ ದೊಡ್ಡ ಪ್ರಾಯಶ್ಚಿತ ಬೇರೊಂದಿಲ್ಲ ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಕ್ಷಮೆಯಾಚನೆ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ರಾಜಕೀಯದಲ್ಲಿ ಟೀಕೆ, ಟಿಪ್ಪಣಿಗಳು ಸಹಜ. ಕೆಲವೊಮ್ಮೆ ಉದ್ವೇಗದಲ್ಲಿ ಮತ್ತೊಬ್ಬರ ಘನತೆಗೆ ಚ್ಯುತಿ ತರುವಂತಹ ಹೇಳಿಕೆ ಅರಿವಿಗೆ ಬಾರದೆಯೇ ಬಂದು ಬಿಡುತ್ತದೆ. ಜಿಂದಾಲ್ ಕಂಪನಿಗೆ ಭೂಮಿ ನೀಡಿರುವ ನಮ್ಮ ಸರ್ಕಾರದ ತೀರ್ಮಾನವನ್ನು ವಿರೋಧಿಸಿ ಮಾತನಾಡುವಾಗ ವಿರೋಧ ಪಕ್ಷದ ಉಪನಾಯಕರಾದ ಅರವಿಂದ ಬೆಲ್ಲದ್ ಅವರು ವೈಯಕ್ತಿಕವಾಗಿ ನನ್ನನ್ನು ನಿಂದನೆ ಮಾಡಿದ್ದರು.

ತಮ್ಮ ತಪ್ಪಿನ ಅರಿವಾಗಿ ಪತ್ರದ ಮೂಲಕ ಕ್ಷಮೆ ಕೋರಿದ್ದಾರೆ. ಅವರ ಈ ನಡೆಯನ್ನು ನಾನು ಅತ್ಯಂತ ಮುಕ್ತವಾಗಿ ಸ್ವಾಗತಿಸುತ್ತೇನೆ, ಜೊತೆಗೆ ಅವರ ಬಗ್ಗೆ ನನ್ನ ಮನಸ್ಸಿನಲ್ಲಿ ದ್ವೇಷವಾಗಲೀ, ಬೇಸರವಾಗಲೀ ಯಾವುದು ಇಲ್ಲವೆಂಬುದನ್ನು ಈ ಮೂಲಕ ತಿಳಿಸಬಯಸುತ್ತೇನೆ. ನಾನು ಒಂದೆರಡು ಬಾರಿ ಬಾಯ್ತಪ್ಪಿನಿಂದ ಏಕವಚನ ಬಳಕೆ ಮಾಡಿ ನಂತರ ವಿಷಾದ ವ್ಯಕ್ತಪಡಿಸಿದ್ದೇನೆ, ಆ ತಪ್ಪು ಮರುಕಳಿಸದಂತೆ ತಿದ್ದಿಕೊಳ್ಳುವ ಪ್ರಯತ್ನವನ್ನು ಮಾಡಿದ್ದೇನೆ. ನನ್ನ ಸುದೀರ್ಘ 40 ವರ್ಷಗಳ ರಾಜಕೀಯ ಜೀವನದಲ್ಲಿ ವಿಪಕ್ಷಗಳ ಹಲವು ಕಿರಿಯ, ಹಿರಿಯ ನಾಯಕರಿಂದ ವೈಯಕ್ತಿಕ ನಿಂದನೆ, ಚಾರಿತ್ರ್ಯಹನನ ಮಾಡುವಂತಹ ಪದಬಳಕೆ ಎಲ್ಲವನ್ನೂ ಕೇಳಿದ್ದೇನೆ, ಎದುರಿಸಿದ್ದೇನೆ. ಮೊದಲ ಬಾರಿಗೆ ಅರವಿಂದ ಬೆಲ್ಲದ್ ಅವರು ತಾವು ಬಳಸಿದ ಪದದ ಬಗ್ಗೆ ಸ್ವತಃ ಅವರೇ ಬೇಸರ ವ್ಯಕ್ತಪಡಿಸಿ, ಪತ್ರದ ಮೂಲಕ ಕ್ಷಮೆ ಕೇಳಿ ಹೊಸ ತಲೆಮಾರಿನ ರಾಜಕಾರಣಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಅರವಿಂದ್ ಅವರ ತಂದೆ ಚಂದ್ರಕಾಂತ ಬೆಲ್ಲದ್ ಅವರು ನನ್ನ ದೀರ್ಘಕಾಲದ ಸ್ನೇಹಿತರು. ಅವರೊಬ್ಬ ಸಜ್ಜನ ರಾಜಕಾರಣಿ. ಅವರ ಸಜ್ಜನಿಕೆಯ ಪರಂಪರೆಯನ್ನು ಅರವಿಂದ್ ಮುಂದುವರಿಸಿಕೊಂಡು ಹೋಗಲಿ ಎಂದು ಹಾರೈಸುತ್ತೇನೆ. ರಾಜಕೀಯವು ಬರೀ ಟೀಕೆ, ಆರೋಪ-ಪ್ರತ್ಯಾರೋಪಗಳಿಂದಲೇ ತುಂಬಿಹೋಗುತ್ತಿರುವ ಈ ಕಾಲದಲ್ಲಿ ಅರವಿಂದ ಬೆಲ್ಲದ್ ಅವರ ನಡೆ ಮೌಲ್ಯಯುತ ರಾಜಕಾರಣದ ಜೀವಂತಿಕೆಯ ಸಂಕೇತವಾಗಿ ಕಾಣುತ್ತಿದೆ. “ಪಶ್ಚಾತಾಪಕ್ಕಿಂತ ದೊಡ್ಡ ಪ್ರಾಯಶ್ಚಿತ ಬೇರೊಂದಿಲ್ಲ” ಎಂಬ ಮಾತು ಈ ಸಂದರ್ಭಕ್ಕೆ ಹೆಚ್ಚು ಅರ್ಥಪೂರ್ಣವೆನಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular