ಬೆಂಗಳೂರು : ಬೆಂಗಳೂರಿನ ಅತ್ಯಂತ ಪುರಾತನ ಹಾಗೂ ಐತಿಹಾಸಿಕ ‘ಬೆಂಗಳೂರು ಕರಗ’ ಮಹೋತ್ಸವಕ್ಕೆ ಮಂಗಳವಾರ ಚಾಲನೆ ಸಿಕ್ಕಿದೆ. ತಿಗಳರಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಈ ಅದ್ಧೂರಿ ಉತ್ಸವಕ್ಕೆ ಚಾಲನೆ ಸಿಕ್ಕಿದ್ದು, ಇಡೀ ನಗರ ಕರಗ ಸಂಭ್ರಮಕ್ಕೆ ಸಜ್ಜಾಗುತ್ತಿದೆ.
ಮಾರ್ಚ್ 24, 2026 (ಮಂಗಳವಾರ) ನಿನ್ನೆ 11 ದಿನಗಳ ಸಂಭ್ರಮಕ್ಕೆ ಚಾಲನೆ ಸಿಕ್ಕಿದೆ. ಮಾರ್ಚ್ 30, 2026 (ಸೋಮವಾರ) – ಭಕ್ತಿಭಾವದ ವಿಶೇಷ ಆಚರಣೆ ನಡೆಯಲಿದೆ. ಏಪ್ರಿಲ್ 01, 2026 ರಂದು ಮಹಾ ಕರಗ ಶಕ್ತ್ಯೋತ್ಸವ ನಡೆಯಲಿದೆ. ಏಪ್ರಿಲ್ 01, 2026 (ಬುಧವಾರ ಮಧ್ಯರಾತ್ರಿ) – ಚೈತ್ರ ಪೂರ್ಣಿಮೆಯಂದು ನಡೆಯುವ ವಿಶ್ವವಿಖ್ಯಾತ ಮೆರವಣಿಗೆ ನಡೆಯಲಿದೆ.
16ನೇ ಬಾರಿಗೆ ಕರಗ ಹೊರಲಿರುವ ಜ್ಞಾನೇಂದ್ರ ಸ್ವಾಮಿ
ಈ ಬಾರಿಯ ವಿಶೇಷವೆಂದರೆ, ಹಿರಿಯ ಅರ್ಚಕ ಎ. ಜ್ಞಾನೇಂದ್ರ ಸ್ವಾಮಿ ಅವರು ಸತತ 16ನೇ ಬಾರಿಗೆ ದ್ರೌಪದಿ ದೇವಿಯ ಕರಗವನ್ನು ಹೊತ್ತು ಸಾಗಲಿದ್ದಾರೆ. ಕಳೆದ ಒಂದೂವರೆ ದಶಕದಿಂದ ನಿಷ್ಠೆಯಿಂದ ಈ ಜವಾಬ್ದಾರಿಯನ್ನು ನಿಭಾಯಿಸುತ್ತಿರುವ ಅವರು, ಈ ಬಾರಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲಿದ್ದಾರೆ.ಈ ವರ್ಷದ ಕರಗಕ್ಕೆ ಮೈಸೂರು ದಸರಾ ಮಾದರಿಯ ಮೆರುಗು ನೀಡಲು ಬಿಬಿಎಂಪಿ ಮತ್ತು ಮುಜರಾಯಿ ಇಲಾಖೆ ನಿರ್ಧರಿಸಿದೆ.: ಹಡ್ಸನ್ ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್ ಮತ್ತು ಅವೆನ್ಯೂ ರಸ್ತೆಗಳು ಜಗಮಗಿಸಲಿವೆ.
ಸಾರ್ವಜನಿಕ ಸೌಲಭ್ಯ: ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮತ್ತು ಮೂಲಭೂತ ಸೌಕರ್ಯಗಳಿಗೆ ವಿಶೇಷ ಒತ್ತು ನೀಡಲಾಗಿದೆ.
ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆ
ದ್ರೌಪದಿ ಆರಾಧನೆ: ಕರಗವು ಮಹಾಭಾರತದ ದ್ರೌಪದಿಗೆ ಸಮರ್ಪಿತವಾದ ಹಬ್ಬ. ದ್ರೌಪದಿಯನ್ನು ಶಕ್ತಿಯ ಸಂಕೇತವಾಗಿ (ಆದಿಶಕ್ತಿ) ಇಲ್ಲಿ ಆರಾಧಿಸಲಾಗುತ್ತದೆ.ಪುರಾಣದ ಪ್ರಕಾರ, ದ್ರೌಪದಿಯು ಅಸುರನೊಬ್ಬನನ್ನು ಸಂಹರಿಸಲು ‘ವೀರಕುಮಾರ’ ಎಂಬ ಸೈನ್ಯವನ್ನು ಸೃಷ್ಟಿಸಿದಳು. ಈ ವೀರಕುಮಾರರ ವಂಶಸ್ಥರೆಂದು ನಂಬಲಾದ ವಹ್ನಿಕುಲ ಕ್ಷತ್ರಿಯ (ತಿಗಳ) ಸಮುದಾಯದವರು ಈ ಹಬ್ಬವನ್ನು ಶತಮಾನಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ.
ಧರ್ಮರಾಯಸ್ವಾಮಿ ದೇವಸ್ಥಾನ
ಬೆಂಗಳೂರಿನ ತಿಗಳರಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನವು ಈ ಉತ್ಸವದ ಕೇಂದ್ರಬಿಂದು. ಪಾಂಡವರಿಗಾಗಿಯೇ ಇರುವ ಭಾರತದ ಕೆಲವೇ ದೇವಸ್ಥಾನಗಳಲ್ಲಿ ಇದು ಒಂದು.
ವಿಶಿಷ್ಟ ಸಂಪ್ರದಾಯಗಳು
ಕರಗ ಹೊರುವ ಅರ್ಚಕರು: ಕರಗ ಹೊರುವ ಅರ್ಚಕರು ಸ್ತ್ರೀ ವೇಷಧಾರಿಗಳಾಗಿರುತ್ತಾರೆ (ಮಂಗಳಸೂತ್ರ, ಬಳೆ ಮತ್ತು ಸೀರೆಯನ್ನು ಧರಿಸಿರುತ್ತಾರೆ). ಇದು ಅವರು ದ್ರೌಪದಿಯ ಅಂಶವನ್ನು ಪ್ರತಿನಿಧಿಸುತ್ತಾರೆ ಎಂಬುದರ ಸಂಕೇತ.
ವೀರಕುಮಾರರ ಕತ್ತಿ ವರಸೆ: ಕರಗ ಸಾಗುವಾಗ ನೂರಾರು ವೀರಕುಮಾರರು ಬರಿಗೈಯಲ್ಲಿ ಕತ್ತಿಗಳನ್ನು ಹಿಡಿದು ‘ಗೋವಿಂದಾ ಗೋವಿಂದಾ’ ಎಂದು ಕೂಗುತ್ತಾ ಸಾಗುವುದು ಮೈಮನ ರೋಮಾಂಚನಗೊಳಿಸುತ್ತದೆ.
ಭಾವೈಕ್ಯತೆಯ ಸಂಕೇತ: ಕರಗ ಮೆರವಣಿಗೆಯು ಕಾಟನ್ಪೇಟೆಯ ತವಕಲ್ ಮಸ್ತಾನ್ ದರ್ಗಾಕ್ಕೆ ಭೇಟಿ ನೀಡುತ್ತದೆ. ಇದು ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಒಂದು ಅಪರೂಪದ ಸಂಪ್ರದಾಯ.

