ಬೆಂಗಳೂರು: ರಾಜ್ಯದಲ್ಲಿ ಕೃಷಿ, ಕೈಗಾರಿಕೆ ಸೇರಿದಂತೆ ವಿವಿಧ ವಲಯಗಳ ಪ್ರಗತಿಗೆ 2026 -27ನೇ ಆರ್ಥಿಕ ವರ್ಷದಲ್ಲಿ 13,52,987 ಕೋಟಿ ರೂ. ಸಾಲ ವಿತರಣೆ ಗುರಿ ಹೊಂದಲಾಗಿದೆ. ಕಳೆದ ಆರ್ಥಿಕ ವರ್ಷದ ಗುರಿಗಿಂತ ಶೇ. 107 ರಷ್ಟು ಹೆಚ್ಚು ಸಾಲ ವಿತರಣೆ ಗುರಿ ಹೊಂದಲಾಗಿದೆ.
13,52,987 ಕೋಟಿ ರೂ.ಗಳ ಪೈಕಿ ಆದ್ಯತಾ ವಲಯಕ್ಕೆ 5,03,264 ಕೋಟಿ ರೂ., ಕೃಷಿಗೆ 2,50,548 ಕೋಟಿ ರೂ., ಎಂಎಸ್ಎಂಇ 2,27,208 ಕೋಟಿ ರೂ., ಶಿಕ್ಷಣಕ್ಕೆ 2528 ಕೋಟಿ ರೂ., ಆದ್ಯತಾ ವಸತಿಗೆ 9465 ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿದೆ.
ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬ್ಯಾಂಕರ್ ಗಳ ಸಭೆಯಲ್ಲಿ ರಾಜ್ಯದ ಬ್ಯಾಂಕಿಂಗ್ ಕ್ಷೇತ್ರದ ಪ್ರಮುಖ ಸಾಧನೆ ಸವಾಲು, ಮುಂಬರುವ ಸಾಲಿನ ಮಹತ್ವದ ಸಾಲ ಯೋಜನೆಗಳ ಕುರಿತಾಗಿ ಚರ್ಚಿಸಿದ್ದು, ಕಳೆದ ಸಲಕ್ಕಿಂತ ಹೆಚ್ಚು ಸಾಲ ಸೌಲಭ್ಯಗಳನ್ನು ಎಲ್ಲಾ ವಲಯಗಳಲ್ಲೂ ವಿತರಿಸಿ ರಾಜ್ಯದ ಪ್ರಗತಿಗೆ ಬ್ಯಾಂಕುಗಳು ಕೈಜೋಡಿಸಬೇಕು. ಮನೆ ಇಲ್ಲದವರಿಗೆ ಆಶ್ರಯಕ್ಕಾಗಿ ಗೃಹ ಸಾಲಗಳನ್ನು ಆದ್ಯತೆ ಮೇರೆಗೆ ಮಂಜೂರು ಮಾಡುವಂತೆ ಸೂಚಿಸಲಾಗಿದೆ.
ಎಲ್ಲ ಬ್ಯಾಂಕರ್ ಗಳಿಗೆ ಪ್ರತಿ ಗ್ರಾಮ ಪಂಚಾಯಿತಿಗೆ ಮತ್ತು ದೀರ್ಘಾವಧಿಗೆ ಪ್ರತಿ ಗ್ರಾಮಕ್ಕೆ ಒಬ್ಬ ವ್ಯವಹಾರಿಕ ಪ್ರತಿನಿಧಿಯನ್ನು ಖಚಿತಪಡಿಸಬೇಕು. ಮನೆ ಇಲ್ಲದವರಿಗೆ ಆಶ್ರಯ ಒದಗಿಸಲು ಗೃಹ ಸಾಲಗಳನ್ನು ಆದ್ಯತೆ ಮೇರೆಗೆ ಮಂಜೂರು ಮಾಡಿ ಬಿಡುಗಡೆ ಮಾಡುವಂತೆ ಸಿಎಸ್ ಸೂಚಿಸಿದ್ದಾರೆ.

