ಶೃಂಗೇರಿ : ಯಾವುದೇ ಸಮುದಾಯ ಶೈಕ್ಷಣಿವಾಗಿ , ಆರ್ಥಿಕವಾಗಿ ಮುಂದೆ ಬರಲು ಸಂಘಟನೆ ಅವಶ್ಯಕವಾಗಿದೆ ಎಂದು ಶೃಂಗೇರಿ ಕುಂಬಾರ ಯುವ ವೇದಿಕೆ ಅಧ್ಯಕ್ಷ ಮೆಣಸೆ ಚಂದ್ರಶೇಖರ್ ಹೇಳಿದರು.
ಮೆಣಸೆ ಗ್ರಾಪಂನ ಕಲ್ಕಟ್ಟೆ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಕುಂಬಾರ ಯುವ ವೇದಿಕೆಯಿಂದ ಭಾನುವಾರ ಏರ್ಪಡಿಸಿದ್ದ ಶ್ರೀ ಮಹಾಗಣಪತಿ ಹೋಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದು ಹಲವು ಸಮುದಾಯದವರು ಸಂಘಟನೆ ಹುಟ್ಟುಹಾಕುತ್ತಿದ್ದಾರೆ. ಇದರಿಂದ ಆ ಸಮುದಾಯದ ಅಭಿವೃದ್ಧಿಯಾಗಲು ಸಾಧ್ಯವಾಗುತ್ತಿದೆ.ಯುವ ಜನಾಂಗ ಸಮುದಾಯವನ್ನು ಬೆಳೆಸಲು ತಮ್ಮನ್ನು ತೊಡಗಿಸಿಕೊಳ್ಳಬೇಕು. ನಮ್ಮ ಸಮುದಾಯವು ಈಗ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದು, ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವುದರಿಂದ ಸಮಾಜದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.
ಕುಂಬಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ್ ಮಾತನಾಡಿ, ತಾಲೂಕು ಕೇಂದ್ರದಲ್ಲಿ ನಮ್ಮ ಸಮುದಾಯವನ್ನು ಸಂಘಟಿಸುವ ಮೂಲಕ ಸಂಘಕ್ಕೆ ಶಕ್ತಿ ತುಂಬಲಾಗಿದೆ. ಸಂಘಟಿತರಾಗಿದ್ದರೆ ನಮಗೆ ಹೆಚ್ಚಿನ ಶಕ್ತಿ ಬರುತ್ತದೆ. ಮಹಿಳೆಯರು ಸ್ವ-ಉದ್ಯೋಗಕ್ಕೆ ಮಹತ್ವ ನೀಡಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕುಂಬಾರ ಯುವ ವೇದಿಕೆ (ರಿ) ಕುಂಬಾರ ಯಾನೆ ಕುಲಾಲ ಸಂಘದ ಸಾರಥ್ಯದಲ್ಲಿ ನಡೆದ ‘ಸಾಂಸ್ಕೃತಿಕ ವೈಭವ’ ಕಾರ್ಯಕ್ರಮ ಎಲ್ಲರ ಮನಸೂರೆಗೊಳಿಸಿತು.ಶೃಂಗೇರಿಯ ಕಲ್ಕಟ್ಟೆ ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮವು ಬಹಳ ಅದ್ದೂರಿಯಾಗಿ ನೆರವೇರಿತು. ರಾಯರ ಸನ್ನಿಧಿಯಲ್ಲಿ ಮೊದಲು ಮಹಾಗಣಪತಿ ಹೋಮ, ವಿಶೇಷ ಪೂಜೆ ನೆರವೇರಿದ್ದು, ಬಳಿಕ ಸಮುದಾಯದ ಜನತೆಗೆ ಪ್ರಸಾದ ವಿನಿಯೋಗ ಮಾಡಲಾಯಿತು. ನಂತರ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳ ಸ್ಪರ್ಧೆ ಆರಂಭವಾಯಿತು. ಪುಟಾಣಿ ಮಕ್ಕಳಿಂದ ಹಿಡಿದು ವಯಸ್ಕರರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ದೂರದ ಊರುಗಳಿಂದ ಬಂದು ಹಲವಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಬಹುಮಾನ ಗಳಿಸಿದರು.

ಕುಮಾರಿ ವರ್ಷಿಣಿ ಮತ್ತು ವಂದಿತ್ ಹರಿಹರಪುರ, ಇವರು ನಡೆಸಿಕೊಟ್ಟ ಗೀತಾ ಗಾಯನಕ್ಕೆ ಜನರು ತಲೆದೂಗಿದರು. ರಾಮು ಕಲಾಬಳಗ (ರಾಮಕೃಷ್ಣ ಹೆಚ್ಚೆ) ಕೊಪ್ಪ ಇವರು ನಡೆಸಿಕೊಟ್ಟ ಕಿರು ನಗೆ ನಾಟಕ ಜನರನ್ನು ಹಾಸ್ಯದ ನಗೆಗಡಲಲ್ಲಿ ತೇಲಿಸಿತು. ವಿಶೇಷವಾಗಿ ದಂಪತಿಗಳಿಗಾಗಿ ಆಯೋಜಿಸಿದ್ದ ‘’ಆದರ್ಶ ದಂಪತಿಗಳು ಕಾರ್ಯಕ್ರಮ ‘’ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು, ನಂತರ ’ಆದರ್ಶ ದಂಪತಿಗಳು ಸ್ಪರ್ಧೆಯಲ್ಲಿ ವಿಜೇತರಾದ ದಂಪತಿಗಳಿಗೆ ಸುಮಾರು 5000.00 (ಐದು ಸಾವಿರ ರೂಪಾಯಿ) ಬೆಲೆಬಾಳುವ ರೇಷ್ಮೆಸೀರೆ ಹಾಗೂ ಪಂಚೆ ಶಾಲನ್ನು ಬಹುಮಾನವಾಗಿ ನೀಡಲಾಯಿತು.

ಹರೀಶ್ ಹೆಚ್.ಎನ್.ಕಲ್ಕಟ್ಟೆ ಟೇಕ್ವಾಂಡೋ ಬ್ಲಾಕ್ ಬೆಲ್ಟ್ ಡಾನ್ (ಕರಾಟೆ ಬ್ಲಾಕ್ ಬೆಲ್ಟ್ )ಇವರ ತರಬೇತಿಯ ವಿದ್ಯಾರ್ಥಿಗಳಿಂದ ಟೇಕ್ವಾಂಡೋ ಪ್ರದರ್ಶನ ನೋಡುಗರನ್ನು ಬೆರಗುಗೊಳಿಸಿತು. ಸೋಲೋ ಹಾಡುಗಾರಿಕೆ, ಸೋಲೋ ನೃತ್ಯ, ಯುಗಳ ಗೀತೆ, ಜೋಡಿ ನೃತ್ಯ, ಛದ್ಮವೇಷ ಕಿರುನಾಟಕ (ಎಕಪಾತ್ರಾಭಿನಯ) ಸ್ಪರ್ಧೆಯಲ್ಲಿ ಮಕ್ಕಳು, ದೊಡ್ಡವರು ಭಾಗವಹಿಸಿ ವಿಶೇಷ ಬಹುಮಾನ ಪಡೆದರು. ವಿಶೇಷ ಕಾರ್ಯಕ್ರಮದಲ್ಲಿ ಮಹಿಳೆಯರು ಸೀರೆಯ ನಿಖರವಾದ ಬೆಲೆ ಹೇಳಿ ಬಹುಮಾನವಾಗಿ ಸೀರೆಯನ್ನು ಪಡೆದರು.
ಮಹಿಳೆಯರಿಗಾಗಿ ಹೂ ಕಟ್ಟುವ ಸ್ಪರ್ಧೆ
ವಿಶೇಷವಾಗಿ ಮಹಿಳೆಯರಿಗಾಗಿ ಹೂ ಕಟ್ಟುವ ಸ್ಪರ್ಧೆ ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಯಿತು.
ಪ್ರತ್ಯೇಕವಾದ ‘ಸಮುದಾಯ ಭವನ’ ನಿರ್ಮಿಸಿ ಕೊಡಿ
ಶೃಂಗೇರಿ ಪಟ್ಟಣದಲ್ಲಿ ಕುಂಬಾರರ ಸಮುದಾಯಕ್ಕೆ ಪ್ರತ್ಯೇಕವಾದ ಸಮುದಾಯ ಭವನ ನಿರ್ಮಿಸಿಕೊಡುವಂತೆ ಸಮುದಾಯದ ಜನರು ಆಗ್ರಹಿಸಿದ್ದಾರೆ. ಕುಂಬಾರರ ಸಮುದಾಯಕ್ಕೆ ಮದುವೆ, ಇನ್ನಿತರ ಕಾರ್ಯಕ್ರಮ ಮಾಡಲು ಪ್ರತ್ಯೇಕವಾದ ಸ್ಥಳ ಇಲ್ಲ. ಸಂಘದ ಕಾರ್ಯಕ್ರಮಗಳನ್ನು ಮಾಡಲು ಬಾಡಿಗೆ ಕಟ್ಟಡವನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸಮುದಾಯ ಭವನ ನಿರ್ಮಿಸಲು ಸರ್ಕಾರ ಸೂಕ್ತ ಸ್ಥಳದ ವ್ಯವಸ್ಥೆ ಮಾಡಬೇಕು, ಸಮುದಾಯ ಭವನ ನಿರ್ಮಿಸಲು ಸರ್ಕಾರ ಅನುದಾನ ಬಿಡುಗಡೆ ಮಾಡಬೇಕೆಂದು ಕುಂಬಾರರ ಸಮುದಾಯದ ಜನರು ಆಗ್ರಹಿಸಿದ್ದಾರೆ.
* ರಂಜಿತ್ S.S ಶೃಂಗೇರಿ