ಬೆಂಗಳೂರು: ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿರುವುದು ಆರ್ಥಿಕ ಕ್ಷೇತ್ರದ ಬಗೆಗಿನ ಅವರ ಅಜ್ಞಾನ, ಆಡಳಿತದ ಅನುಭವದ ಕೊರತೆ ಮತ್ತು ರಾಜಕೀಯ ಹತಾಶೆಯನ್ನು ತೋರಿಸುತ್ತದೆ ಎಂದು ಸಿಎಂ ಸಿದ್ಧರಾಮಯ್ಯ ಟೀಕಿಸಿದ್ದಾರೆ.
ಕಳೆದ ತಿಂಗಳಷ್ಟೇ ಈ ಆರ್ಥಿಕ ವರ್ಷದ ಆಯವ್ಯಯಪತ್ರವನ್ನು ನಾನು ಮಂಡಿಸಿದ್ದೇನೆ, ಅದು ಅಂಕಿ-ಅಂಶಗಳ ಕಾಗದದ ಕಂತೆ ಅಲ್ಲ, ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಒಪ್ಪಿಸಿರುವ ಪ್ರಾಮಾಣಿಕ ಲೆಕ್ಕಪತ್ರ. ಆ ಆಯವ್ಯಯವನ್ನು ವಿಧಾನಮಂಡಲದ ಉಭಯ ಸದನಗಳು ಒಪ್ಪಿಕೊಂಡು ಅಂಗೀಕರಿಸಿವೆ. ಇದೇ ನಮ್ಮ ಶ್ವೇತಪತ್ರ ಎಂದು ತಿಳಿಸಿದ್ದಾರೆ.
ಇದರ ಬಗ್ಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಕೂಲಂಕಷವಾಗಿ ಚರ್ಚೆ ನಡೆದಿದೆ. ವಿಜಯೇಂದ್ರ ಅವರ ಪಕ್ಷದವರೂ ಸೇರಿದಂತೆ 21 ಜನ ವಿರೋಧ ಪಕ್ಷದ ಸದಸ್ಯರೂ ಮಾತನಾಡಿ ಎತ್ತಿದ್ದ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದ್ದೇನೆ. ಇದರ ಬಗ್ಗೆ ಇನ್ನೂ ನಿಮಗೆ ಅನುಮಾನಗಳಿದ್ದರೆ ವಿವರಣೆ ಕೊಡಲು ನಾನು ಸಿದ್ಧನಿದ್ದೇನೆ. ಉಪಚುನಾವಣೆಯ ಅಖಾಡದಲ್ಲಿಯೇ ನಿಮ್ಮ ಜೊತೆ ಬಹಿರಂಗ ಚರ್ಚೆಗೂ ನಾನು ಸಿದ್ಧನಿದ್ದೇನೆ. ದಯವಿಟ್ಟು ಕೇವಲ ರಾಜಕೀಯ ಮಾತನಾಡಬೇಕೆಂಬ ಬಾಯಿ ಚಪಲಕ್ಕಾಗಿ ಆಯವ್ಯಯ ಪತ್ರದ ಪಾವಿತ್ರ್ಯವನ್ನು ಹಾಳು ಮಾಡಲು ಹೋಗಬೇಡಿ.
ರಾಜ್ಯ ದಿವಾಳಿ ಸ್ಥಿತಿಯಲ್ಲಿದೆ ಎಂಬ ಆರೋಪದ ಹಿಂದೆ ನಮ್ಮ ಸರ್ಕಾರವನ್ನು ರಾಜಕೀಯವಾಗಿ ಎದುರಿಸಲಾಗದ ಬಿಜೆಪಿ ನಾಯಕರ ಅಸಹಾಯಕತೆ, ಹತಾಶೆ ಮತ್ತು ಅಸೂಯೆ ಇದೆ. ಯಾವ ಇಲಾಖೆಯೂ ನೌಕರರಿಗೆ ಸಂಬಳ ನೀಡಲಾಗದ ದಿವಾಳಿ ಸ‍್ಥಿತಿಯಲ್ಲಿಲ್ಲ. ನಮ್ಮ ಸರ್ಕಾರ ಆರ್ಥಿಕವಾಗಿ ಮಾತ್ರವಲ್ಲ ರಾಜಕೀಯವಾಗಿಯೂ ಸುಭದ್ರವಾಗಿದೆ. ರಾಜ್ಯದ ಜನತೆ ನೆಮ್ಮದಿಯಿಂದ ಇದ್ದಾರೆ.
ವಿಜಯೇಂದ್ರ ಅವರೇ, ಕರ್ನಾಟಕದ ಆರ್ಥಿಕ ಸ್ಥಿತಿ ನಿಮ್ಮ ಪಕ್ಷದ ಆಡಳಿತ ಇರುವ ಕೇಂದ್ರ ಸರ್ಕಾರಕ್ಕಿಂತಲೂ ಉತ್ತಮ ಸ್ಥಿತಿಯಲ್ಲಿದೆ. ನಮ್ಮ ಈ ವರ್ಷದ ನಮ್ಮ ಬಜೆಟ್ ಗಾತ್ರ ರೂ.4,48,004 ಕೋಟಿಗಳಾಗಿದ್ದು, ಇದು ಕಳೆದ ವರ್ಷದ ಬಜೆಟ್ ಗಾತ್ರಕ್ಕಿಂತ 38,455 ಕೋಟಿ ರೂ. ಗಳಷ್ಟು ಹೆಚ್ಚಿನದ್ದಾಗಿದೆ. ನಮ್ಮ ಬಜೆಟ್ ಗಾತ್ರದಲ್ಲಿ ಶೇ.9.4ರಷ್ಟು ಬೆಳವಣಿಗೆಯಾಗಿದ್ದರೆ, ಕೇಂದ್ರ ಸರ್ಕಾರದ ಬಜೆಟ್ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.5.6ರಷ್ಟು ಮಾತ್ರ ಬೆಳವಣಿಗೆ ಸಾಧಿಸಿದೆ. ಕಳೆದ ವರ್ಷ ₹50.66 ಲಕ್ಷ ಕೋಟಿಗಳ ಬಜೆಟ್ ಮಂಡಿಸಿದ್ದ ಕೇಂದ್ರ ಸರ್ಕಾರ ಈ ವರ್ಷ 53.47 ಲಕ್ಷ ಕೋಟಿ ರೂ.ಗಾತ್ರದ ಬಜೆಟ್ ಮಂಡಿಸಿದ್ದಾರೆ. ನಮ್ಮ ಬಜೆಟ್ ಗಾತ್ರ ಆರ್ಥಿಕ ಪ್ರಗತಿಯನ್ನು ಸೂಚಿಸುತ್ತಿದೆ. ಆರ್ಥಿಕ ಹಿಂಜರಿತ ಇದ್ದಿದ್ದರೆ ಈ ಪ್ರಗತಿ ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿದ್ದಾರೆ.
2025-26 ರಲ್ಲಿ ದೇಶದ ಜಿಡಿಪಿಯ ಬೆಳವಣಿಗೆ ಶೇ.7.4 ರಷ್ಟಿದ್ದರೆ, ರಾಜ್ಯದ ಜಿ.ಎಸ್.ಡಿ.ಪಿಯು ಶೇ.8.1 ರಷ್ಟು ಬೆಳವಣಿಗೆ ದಾಖಲಿಸಿದೆ. ಕರ್ನಾಟಕದ ಜಿಎಸ್‌ಡಿಪಿ ದೇಶದ ಜಿಡಿಪಿ ಬೆಳವಣಿಗೆಗಿಂತ ಹೆಚ್ಚಿರುವುದು ನಮ್ಮ ಸರ್ಕಾರದ ಆರ್ಥಿಕ ಸುಭದ್ರತೆಗೆ ಸಾಕ್ಷಿಯಾಗಿದೆ. ಈ ವರ್ಷ ನಮ್ಮ ಜಿ.ಎಸ್.ಡಿ.ಪಿ ರೂ. 33,05,500 ಕೋಟಿಯಷ್ಟಿದೆ ಎಂದು ಸಿಎಂ ತಿಳಿಸಿದ್ದಾರೆ.

