HomeLatest Newsರಾಜ್ಯ ಧಾರ್ಮಿಕ ಪರಿಷತ್ತಿನ ಸಭೆ ನಡೆಸಿದ ಡಿಸಿಎಂ ಡಾ.ಜಿ.ಪರಮೇಶ್ವರ;ದೇವಾಲಯಗಳ ಸಮಗ್ರ ಅಭಿವೃದ್ಧಿಗೆ ಪಣ

ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆ ನಡೆಸಿದ ಡಿಸಿಎಂ ಡಾ.ಜಿ.ಪರಮೇಶ್ವರ;ದೇವಾಲಯಗಳ ಸಮಗ್ರ ಅಭಿವೃದ್ಧಿಗೆ ಪಣ

ಬೆಂಗಳೂರು- ರಾಜ್ಯದಲ್ಲಿನ ‘ಎ’ ವರ್ಗ ಮತ್ತು ‘ಬಿ’ ವರ್ಗದ ದೇವಸ್ಥಾನಗಳ ಹೆಸರಿಗೆ ಭೂಮಿ ಖರೀದಿಸುವಂತೆ ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಸೂಚಿಸಿದರು.

ಇಂದು ವಿಧಾನಸೌಧದಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆ ನಡೆಸಿ, ಸದಸ್ಯರೊಂದಿಗೆ ಸುದೀರ್ಘವಾಗಿ ಚರ್ಚಿಸಿದ ಬಳಿಕ ಅಗತ್ಯ ನಿರ್ದೇಶನಗಳನ್ನು ನೀಡಿದರು.

ದೇವಸ್ಥಾನದ ಹೆಸರಿಗೆ ಭೂಮಿ ಖರೀದಿ ಮತ್ತು ಹುಂಡಿ ನಿಗಾ

ದೇವಸ್ಥಾನಗಳಲ್ಲಿ ಸಾಕಷ್ಟು ಹಣವಿದೆ. ಅಭಿವೃದ್ಧಿ ಕಾರ್ಯಗಳ ಜೊತೆಗೆ ದೇವಸ್ಥಾನದ ಹೆಸರಿಗೆ ಭೂಮಿ ಖರೀದಿಸಬೇಕು. ಈ ಆಸ್ತಿ ಶಾಶ್ವತವಾಗಿ ದೇವಸ್ಥಾನಕ್ಕೆ ಉಳಿಯುತ್ತದೆ. ಇದರಿಂದ ಭಕ್ತರಿಗೆ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ದೇವಸ್ಥಾನದ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮತ್ತಷ್ಟು ಅನುಕೂಲವಾಗುತ್ತದೆ‌ ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇವಸ್ಥಾನಗಳ ಹುಂಡಿ ಹಣ ದುರುಪಯೋಗ ತಡೆಯುವ ನಿಟ್ಟಿನಲ್ಲಿ ಹುಂಡಿ ಮೇಲೆ ನಿಗಾವಹಿಸಲು ಸಿಸಿಟಿವಿ ಅಳವಡಿಸುವಂತೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ. ಇದನ್ನು ಆಗಸ್ಟ್ ಕೊನೆಯ ವೇಳೆಗೆ ಪೂರ್ಣಗೊಳಿಸಬೇಕು. ಈ ಬಗ್ಗೆ ಹಗುರವಾಗಿ ಪರಿಗಣಿಸುವುದು ಬೇಡ‌ ಎಂದರು.

ಮೂಲಸೌಕರ್ಯ ಕೊರತೆಗೆ ಅಧಿಕಾರಿಗಳಿಗೆ ತರಾಟೆ

ರಾಜ್ಯದ ಪ್ರಸಿದ್ಧ ದೇವಸ್ಥಾನಗಳಲ್ಲಿ ಭಕ್ತರಿಗೆ ಅಗತ್ಯ ಮೂಲ ಸೌಕರ್ಯಗಳ ಕೊರತೆ ಇದೆ. ನಾನು ಭೇಟಿ ನೀಡಿ ಪರಿಶೀಲಿಸಿದ ದೇವಸ್ಥಾನಗಳಲ್ಲಿ ‘ನಾವು ಯಾವ ಯುಗದಲ್ಲಿದ್ದೇವೆ’ ಎಂಬ ಪ್ರಶ್ನೆ‌ ಮೂಡುತ್ತದೆ. ಯಾರೊಬ್ಬರು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ‌. ದೇವಸ್ಥಾನಗಳಲ್ಲಿ ಪಾವಿತ್ರ್ಯತೆ ಕಾಪಾಡದೆ ಹೋದರೆ ಹೇಗೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ದೇವಸ್ಥಾನಗಳಲ್ಲಿ ಭಕ್ತರಿಗೆ ಮೂಲಸೌಕರ್ಯ ಒದಗಿಸಲು ಯಾವುದೇ ರೀತಿಯಲ್ಲೂ ಹಣದ ಕೊರತೆ ಇಲ್ಲ. ಮಾಸ್ಟರ್ ಪ್ಲಾನ್ ರೂಪಿಸಲು ಸೂಚಿಸಲಾಗಿದೆ. ಈ ಬಗ್ಗೆ ನಿರ್ಲಕ್ಷಿಸುವುದು ಬೇಡ ಎಂದು ಎಚ್ಚರಿಸಿದರು.

‘ಸಿ’ ವರ್ಗದ ದೇವಸ್ಥಾನ ಮತ್ತು ಒತ್ತುವರಿ ತೆರವು

ʼಸಿʼ ವರ್ಗದ ದೇವಸ್ಥಾನಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಯಾವುದೇ ರೀತಿಯ ಸಂಸ್ಥೆಗಳಿಗೆ ದತ್ತು ನೀಡಬಾರದು. ಅಭಿವೃದ್ಧಿ ಹೆಸರಿನಲ್ಲಿ ದತ್ತು ಪಡೆದವರು ದೇವಸ್ಥಾನದ ಆಸ್ತಿ ನಮ್ಮದು ಎಂದು ತಕಾರಾರು ತೆಗೆಯುತ್ತಾರೆ. ‘ಎ’ ವರ್ಗದ ದೇವಸ್ಥಾನಗಳ ಅನುದಾನದಲ್ಲಿ ಶೇ. 10ರಷ್ಟನ್ನು ‘ಸಿ’ ವರ್ಗದ ದೇವಸ್ಥಾನಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಬಳಸಬೇಕು ಎಂದು ತಿಳಿಸಿದರು.

ದೇವಸ್ಥಾನಗಳ ಒತ್ತುವರಿಯಾದ ಭೂಮಿಯನ್ನು ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಈಗಾಗಲೇ ಸೂಚಿಸಲಾಗಿದೆ. ದೇವಸ್ಥಾನಗಳ ಒತ್ತುವರಿಯಾದ ಆಸ್ತಿಗಳನ್ನು ತೆರವುಗೊಳಿಸಲು ಆದ್ಯತೆ ಮೇರೆಗೆ ಸರ್ವೇ ಮಾಡಿಸಿ, ತೆರವುಗೊಳಿಸಿ ಮುಜರಾಯಿ ಇಲಾಖೆಗೆ ಒಪ್ಪಿಸಲು ಕ್ರಮ ಕೈಗೊಳ್ಳಬೇಕು. ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಕಂದಾಯ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಸ್ಪಷ್ಟ ನಿರ್ದೇಶನ ನೀಡಿದರು.

ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿವೇತನ ಮತ್ತು ಸಭೆಯ ಉಪಸ್ಥಿತಿ

ಈ ವೇಳೆ ಶೈಕ್ಷಣಿಕ ವರ್ಷ ಆರಂಭವಾಗಿರುವ ಹಿನ್ನೆಲೆಯಲ್ಲಿ ಅಧಿಸೂಚಿತ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಮತ್ತು ನೌಕರರ ಮಕ್ಕಳಿಗೆ ನೀಡುವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸುವಂತೆ ಸೂಚಿಸಿದರು.

ಸಭೆಯಲ್ಲಿ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಮುಜರಾಯಿ ಆಯುಕ್ತರಾದ ಶರತ್ ಹಾಗೂ ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯರಾದ ಕೆ.ಎಂ.ನಾಗರಾಜು, ಡಾ.‌ ಎ.‌ ರಾಧಾಕೃಷ್ಣ ರಾಜು, ದ್ವಾರಕನಾಥ್, ಮಲ್ಲಿಕಾ ಪ್ರಶಾಂತ್ ಪಕ್ಕಳ, ರವಿಶಂಕರ್ ಶೆಟ್ಟಿ‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು‌.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular