ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್.ಸಿ.ಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್(ಸಿ.ಎಸ್.ಕೆ.) ತಂಡದ ನಡುವಿನ ಐಪಿಎಲ್ ಕ್ರಿಕೆಟ್ ಪಂದ್ಯದ ಟಿಕೆಟ್ ಮಾರಾಟ ಮಾಡುವ ನೆಪದಲ್ಲಿ ಸೈಬರ್ ವಂಚಕರು ಸಾಫ್ಟ್ವೇರ್ ಇಂಜಿನಿಯರ್ ಗೆ 1.45 ಲಕ್ಷ ರೂ. ವಂಚಿಸಿದ್ದಾರೆ. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿ. ನಾರಾಯಣಪುರ ಸಮೀಪದ ಕಾವೇರಪ್ಪ ಲೇಔಟ್ ನ ಗಣೇಶ್ ಎಂಬುವರಿಗೆ ವಂಚನೆ ಮಾಡಲಾಗಿದೆ. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಗಣೇಶ್ ಅವರಿಗೆ ಮಾರ್ಚ್ 30ರಂದು ಪರಿಚಯವಾಗಿದ್ದ ಸೈಬರ್ ವಂಚಕರು ಆರ್.ಸಿ.ಬಿ. ಮತ್ತು ಸಿ.ಎಸ್.ಕೆ. ತಂಡದ ನಡುವಿನ ಐಪಿಎಲ್ ಕ್ರಿಕೆಟ್ ಪಂದ್ಯದ ಟಿಕೆಟ್ ಕೊಡುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದಾರೆ.
ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ಐಪಿಎಲ್ ಪಂದ್ಯದ ಟಿಕೆಟ್ ಮಾರಾಟದ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದರು. ಅವರನ್ನು ಗಣೇಶ್ ಸಂಪರ್ಕಿಸಿದಾಗ ಪಂದ್ಯದ ಟಿಕೆಟ್ ಗಳು, ಊಟದ ಕೂಪನ್, ವಿಐಪಿ ಸೌಲಭ್ಯವಿದೆ ಎಂದು ಆಮಿಷವೊಡ್ಡಿದ್ದರು. ಇದನ್ನು ನಿಜವೆಂದು ನಂಬಿದ ಗಣೇಶ್ ವಂಚಕರು ಹೇಳಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 1.45 ಲಕ್ಷ ರೂ. ಹಾಕಿದ್ದಾರೆ.
ಹಣ ಪಡೆದ ನಂತರ ವಂಚಕರು ಚಿನ್ನಸ್ವಾಮಿ ಗೇಟ್ ನಂಬರ್ 10ರ ಬಳಿ ಬಂದು ಟಿಕೆಟ್ ಪಡೆದುಕೊಳ್ಳುವಂತೆ ಸೂಚಿಸಿದ್ದರು. ಅದರಂತೆ ಗಣೇಶ್ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಹೋಗಿ ವಂಚಕರನ್ನು ಸಂಪರ್ಕಿಸಲು ಯತ್ನಿಸಿದಾಗ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಟಿಕೆಟ್ ಕೂಡ ಕೊಟ್ಟಿಲ್ಲ, ಹಣವನ್ನೂ ಮರಳಿಸಿಲ್ಲ. ವಂಚನೆಗೊಳಗಾದ ಗಣೇಶ್ ಮಹದೇವಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

