ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಮತ್ತು ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2: ದಿ ರಿವೆಂಜ್’ ಚಿತ್ರವು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಈ ಚಿತ್ರವು ಉತ್ತರ ಅಮೆರಿಕಾದಲ್ಲಿ ಕಳೆದ 9 ವರ್ಷಗಳಿಂದ ಅಜೇಯವಾಗಿದ್ದ ಎಸ್.ಎಸ್. ರಾಜಮೌಳಿ ಅವರ ‘ಬಾಹುಬಲಿ 2’ ಚಿತ್ರದ ದಾಖಲೆಯನ್ನು ಅಳಿಸಿಹಾಕಿದೆ.
ಉತ್ತರ ಅಮೆರಿಕಾದಲ್ಲಿ ‘ಬಾಹುಬಲಿ 2’ ಸಿನಿಮಾ ಸುಮಾರು 20 ಮಿಲಿಯನ್ ಡಾಲರ್ ಗಳಿಕೆ ಮಾಡಿ ದಶಕದ ಹತ್ತಿರದವರೆಗೂ ಅಗ್ರಸ್ಥಾನದಲ್ಲಿತ್ತು. ಆದರೆ, ಈಗ ‘ಧುರಂಧರ್ 2’ ಅಲ್ಲಿ 22 ಮಿಲಿಯನ್ ಡಾಲರ್ (ಸುಮಾರು 180 ಕೋಟಿ ರೂ.ಗೂ ಅಧಿಕ) ಗಳಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ಐತಿಹಾಸಿಕ ಸಾಧನೆಯನ್ನು ಬಾಹುಬಲಿ ಚಿತ್ರತಂಡ ಮುಕ್ತಕಂಠದಿಂದ ಶ್ಲಾಘಿಸಿದೆ.
ಬಾಹುಬಲಿ ನಿರ್ಮಾಪಕರ ಅಭಿನಂದನೆ: ಬಾಹುಬಲಿ ಚಿತ್ರದ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಧುರಂಧರ್ ತಂಡಕ್ಕೆ ಅಭಿನಂದನೆ ಸಲ್ಲಿಸಲಾಗಿದ್ದು, “9 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಭಾರತ ಮತ್ತು ವಿದೇಶಗಳಲ್ಲಿ ಹೊಸ ಬೆಂಚ್‌ಮಾರ್ಕ್ ಸ್ಥಾಪಿಸಿದ ಆದಿತ್ಯ ಧರ್ ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು” ಎಂದು ಬರೆಯಲಾಗಿದೆ. ಚಿತ್ರದ ನಿರ್ಮಾಪಕ ಶೋಬು ಯಾರ್ಲಗಡ್ಡ ಅವರು ಕೂಡ ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು, “ದಾಖಲೆಗಳು ಮುರಿಯಲೆಂದೇ ಇರುವುದು, ಈ ಸಿನಿಮಾದ ಯಶಸ್ಸು ಖುಷಿ ನೀಡಿದೆ” ಎಂದಿದ್ದಾರೆ.
ಬಾಕ್ಸ್ ಆಫೀಸ್ ಸುಲ್ತಾನ್ ಧುರಂಧರ್: ಮಾರ್ಚ್ 19 ರಂದು ತೆರೆಕಂಡ ಈ ಸ್ಪೈ ಥ್ರಿಲ್ಲರ್ ಸಿನಿಮಾ ಇದುವರೆಗೆ ವಿಶ್ವಾದ್ಯಂತ 1250 ಕೋಟಿ ರೂ. ಗಳಿಕೆ ಮಾಡಿದ್ದರೆ, ಭಾರತದಲ್ಲಿ 840 ಕೋಟಿ ರೂ. ಕಲೆಕ್ಷನ್ ಮಾಡಿದೆ. ಚಿತ್ರದಲ್ಲಿ ರಣವೀರ್ ಸಿಂಗ್ ಅವರು ‘ಜಸ್ಕಿರತ್ ಸಿಂಗ್ ರಂಗಿ’ ಎಂಬ ಭಾರತೀಯ ಗೂಢಚಾರಿಯ ಪಾತ್ರದಲ್ಲಿ ನಟಿಸಿದ್ದು, ಪಾಕಿಸ್ತಾನದ ಭೂಗತ ಜಗತ್ತನ್ನು ಧ್ವಂಸ ಮಾಡುವ ಕಥೆ ಪ್ರೇಕ್ಷಕರಿಗೆ ಸಖತ್ ಕಿಕ್ ನೀಡಿದೆ.
ಅರ್ಜುನ್ ರಾಂಪಾಲ್, ಆರ್. ಮಾಧವನ್ ಮತ್ತು ಸಂಜಯ್ ದತ್ ಅವರಂತಹ ಘಟಾನುಘಟಿ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಶಶ್ವತ್ ಸಚದೇವ್ ಅವರ ಸಂಗೀತ ಕೂಡ ಸಿನಿಮಾದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

