ಬೆಂಗಳೂರು: ಅಶ್ಲೀಲ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಶಿಕ್ಷಕಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಪುಟ್ಟಪರ್ತಿ ಮೂಲದ ಹರ್ಷದ್(37) ಬಂಧಿತ ಆರೋಪಿ. ಬೆಂಗಳೂರಿನ ಪ್ರತಿಷ್ಠಿತ ಶಾಲೆಯ ಶಿಕ್ಷಕಿಗೆ ಈತ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಆಂಧ್ರಪ್ರದೇಶ ಮೂಲದ ಶಿಕ್ಷಕಿ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಪ್ರತಿಷ್ಠಿತ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ವೀರಸಂದ್ರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ಈಗಾಗಲೇ ಮದುವೆಯಾಗಿ ಪತ್ನಿಯಿಂದ ದೂರವಾಗಿರುವ ಆರೋಪಿ ಹರ್ಷದ್ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಜಾಲತಾಣದಲ್ಲಿ ಶಿಕ್ಷಕಿ ಮತ್ತು ಆರೋಪಿ ಪರಿಚಯವಾಗಿ ಆತ್ಮೀಯರಾಗಿದ್ದರು. ಅದನ್ನೇ ದುರುಪಯೋಗಪಡಿಸಿಕೊಂಡ ಆರೋಪಿ ಶಿಕ್ಷಕಿಯ ಖಾಸಗಿ ವಿಡಿಯೋ ಸಂಗ್ರಹಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡಲು ಮುಂದಾಗಿದ್ದಾನೆ. ಹೆದರಿದ ಶಿಕ್ಷಕಿ ಆರೋಪಿಗೆ 1 ಲಕ್ಷ ರೂ. ವರೆಗೂ ಹಣ ಕೊಟ್ಟಿದ್ದಾರೆ. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ಹಣ ಕೊಡುವುದಾಗಿ ಬೆಂಗಳೂರಿಗೆ ಕರೆಸಿಕೊಂಡು ಆತನ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

