ಅಮೆರಿಕದ ನಾರ್ತ್ ಕೆರೊಲಿನಾ ರಾಜ್ಯದ ಮೆಕ್‌ಡೊವೆಲ್ ಹೈಸ್ಕೂಲ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶಾಲಾ ಕೌನ್ಸಿಲರ್‌ಗೆ ನ್ಯಾಯಾಲಯವು ಗರಿಷ್ಠ 40 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜೆಸ್ಸಿಕಾ ಫಿನ್ಲೆ ಎಂಬಾಕೆಯೇ ಶಿಕ್ಷೆಗೆ ಗುರಿಯಾದ ಮಾಜಿ ಕೌನ್ಸಿಲರ್. ಈಕೆ ಶಾಲೆಯಲ್ಲಿ ವಾಲಿಬಾಲ್ ತರಬೇತುದಾರಳಾಗಿಯೂ ಸೇವೆ ಸಲ್ಲಿಸುತ್ತಿದ್ದಳು.
ನಡೆದಿದ್ದೇನು? 2023-24ನೇ ಶೈಕ್ಷಣಿಕ ವರ್ಷದಲ್ಲಿ, ತನ್ನ ಮಾನಸಿಕ ಆತಂಕದ (Anxiety) ಸಮಸ್ಯೆಗೆ ಪರಿಹಾರ ಹುಡುಕುತ್ತಾ 14 ವರ್ಷದ ವಿದ್ಯಾರ್ಥಿನಿ ಜೆಸ್ಸಿಕಾ ಬಳಿಗೆ ಬಂದಿದ್ದಳು. ವಿದ್ಯಾರ್ಥಿನಿಗೆ ಕೌನ್ಸಿಲಿಂಗ್ ನೀಡಬೇಕಿದ್ದ ಜೆಸ್ಸಿಕಾ, ಆಕೆಯ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡಿದ್ದಾಳೆ. ನಿಧಾನವಾಗಿ ಆಕೆಯನ್ನು ತನ್ನ ಜಾಲಕ್ಕೆ ಬೀಳಿಸಿಕೊಂಡು ಲೈಂಗಿಕ ಸಂಬಂಧ ಬೆಳೆಸಿದ್ದಾಳೆ ಎಂದು ಪ್ರಾಸಿಕ್ಯೂಟರ್‌ಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ವಿದ್ಯಾರ್ಥಿನಿಗೆ 15 ವರ್ಷ ತುಂಬುವ ವೇಳೆಗೆ ದೌರ್ಜನ್ಯದ ತೀವ್ರತೆ ಹೆಚ್ಚಾಗಿದ್ದು, ಶಾಲೆಯ ಒಳಗಿರುವ ಕೌನ್ಸಿಲರ್ ಕಚೇರಿಯಲ್ಲೇ ಲೈಂಗಿಕ ಕೃತ್ಯಗಳು ನಡೆದಿದ್ದವು ಎಂದು ತನಿಖೆಯಿಂದ ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಇಬ್ಬರ ನಡುವೆ ನಡೆದಿದ್ದ ಅಶ್ಲೀಲ ಸಂದೇಶಗಳ ಸಂಭಾಷಣೆಯನ್ನು ಬಾಲಕಿಯ ಪೋಷಕರು ಪತ್ತೆಹಚ್ಚಿದಾಗ ಈ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.
ಬೆದರಿಕೆ ಮತ್ತು ಒತ್ತಡ: ಒಂದು ಹಂತದಲ್ಲಿ ಬಾಲಕಿ ಈ ಸಂಬಂಧದಿಂದ ಹೊರಬರಲು ಯತ್ನಿಸಿದ್ದಳು. ಆದರೆ, “ನೀನು ನನ್ನನ್ನು ಬಿಟ್ಟರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಜೆಸ್ಸಿಕಾ ಬೆದರಿಕೆ ಹಾಕುವ ಮೂಲಕ ಬಾಲಕಿಯ ಮೇಲೆ ಮಾನಸಿಕ ಒತ್ತಡ ಹೇರಿದ್ದಳು ಎಂದು ಸಂತ್ರಸ್ತೆ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾಳೆ. ಫೆಬ್ರವರಿ 2024ರಲ್ಲಿ ಈ ಹಗರಣ ಬಯಲಾದ ನಂತರ ಜೆಸ್ಸಿಕಾ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದಳು.
ನ್ಯಾಯಾಲಯದ ತೀರ್ಪು: ಆರಂಭದಲ್ಲಿ ತಪ್ಪೊಪ್ಪಿಕೊಳ್ಳಲು ನಿರಾಕರಿಸಿದ್ದ ಜೆಸ್ಸಿಕಾ, ನಂತರ 15 ವರ್ಷದೊಳಗಿನ ಮಗುವಿನ ಮೇಲಿನ ದೌರ್ಜನ್ಯ ಸೇರಿದಂತೆ ಒಟ್ಟು 16 ಆರೋಪಗಳಲ್ಲಿ ತಪ್ಪೊಪ್ಪಿಕೊಂಡಿದ್ದಾಳೆ. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಕನಿಷ್ಠ 28 ವರ್ಷ ಮತ್ತು ಗರಿಷ್ಠ 40 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ. ವಿಚಾರಣೆಯ ಸಂದರ್ಭದಲ್ಲಿ ಜೆಸ್ಸಿಕಾ ತನ್ನ ಕೃತ್ಯಕ್ಕಾಗಿ ಕ್ಷಮೆಯಾಚಿಸಿದ್ದಾಳೆ.

