HomeBusinessಎನ್ ಚಂದ್ರಶೇಖರನ್ ನಿರ್ಗಮನದ ಬೆನ್ನಲ್ಲೇ ಟಾಟಾ ಗ್ರೂಪ್ ಷೇರುಗಳಿಗೆ ಭಾರಿ ಪೆಟ್ಟು: 44,000 ಕೋಟಿ ರೂ....

ಎನ್ ಚಂದ್ರಶೇಖರನ್ ನಿರ್ಗಮನದ ಬೆನ್ನಲ್ಲೇ ಟಾಟಾ ಗ್ರೂಪ್ ಷೇರುಗಳಿಗೆ ಭಾರಿ ಪೆಟ್ಟು: 44,000 ಕೋಟಿ ರೂ. ನಷ್ಟ

ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಹಾಗೂ ಮತ್ತೊಮ್ಮೆ ಆ ಹುದ್ದೆಗೆ ಸ್ಪರ್ಧಿಸದಿರಲು ಎನ್ ಚಂದ್ರಶೇಖರನ್ ನಿರ್ಧರಿಸಿದ ಬೆನ್ನಲ್ಲೇ, ಟಾಟಾ ಗ್ರೂಪ್ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡಿದೆ. ಕಳೆದ ಎರಡು ವಹಿವಾಟು ದಿನಗಳಲ್ಲಿ ಟಾಟಾ ಸಮೂಹದ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು 44,000 ಕೋಟಿ ರೂಪಾಯಿ ನಷ್ಟವಾಗಿದೆ.

ಕ್ಯಾಪಿಟಲೈನ್ ಪ್ಲಸ್ ದತ್ತಾಂಶದ ಪ್ರಕಾರ, ಟಾಟಾ ಸಮೂಹದ 26 ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯವು 27.48 ಟ್ರಿಲಿಯನ್ ರೂಪಾಯಿಯಿಂದ 27.04 ಟ್ರಿಲಿಯನ್ ರೂಪಾಯಿಗೆ ಕುಸಿದಿದೆ. ಈ ಒಟ್ಟು ನಷ್ಟದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಕಂಪನಿಯೊಂದೇ ಶೇಕಡಾ 81 ರಷ್ಟು ಅಂದರೆ ಬರೋಬ್ಬರಿ 35,421 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದೆ. ಇದರ ಜೊತೆಗೆ ಟೈಟಾನ್ ಕಂಪನಿಯ ಮೌಲ್ಯದಲ್ಲಿ 7,040 ಕೋಟಿ ರೂಪಾಯಿ ಇಳಿಕೆಯಾಗಿದ್ದರೆ, ಟಾಟಾ ಸ್ಟೀಲ್, ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್, ಟ್ರೆಂಟ್ ಮತ್ತು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಕಂಪನಿಗಳು ಕೂಡ ದೊಡ್ಡ ಮಟ್ಟದ ಹಿನ್ನಡೆ ಕಂಡಿವೆ.

ಆದರೆ ಈ ಕುಸಿತದ ನಡುವೆಯೂ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ಕಂಪನಿಯು ಉತ್ತಮ ಪ್ರದರ್ಶನ ನೀಡಿದೆ. ಚಾಲೂ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸಂಸ್ಥೆಯು ಅತ್ಯುತ್ತಮ ಫಲಿತಾಂಶ ದಾಖಲಿಸಿದ ಹಿನ್ನೆಲೆಯಲ್ಲಿ, ಇದರ ಷೇರು ಮೌಲ್ಯ ಶೇಕಡಾ 5 ರಷ್ಟು ಏರಿಕೆಯಾಗಿ ಗ್ರೂಪ್‌ನ ಮಾರುಕಟ್ಟೆ ಮೌಲ್ಯಕ್ಕೆ 10,533 ಕೋಟಿ ರೂಪಾಯಿ ಸೇರ್ಪಡೆ ಮಾಡಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲೂ ಮಾರಾಟ ಪ್ರಕ್ರಿಯೆ ಉತ್ತಮವಾಗಿರಲಿದೆ ಎಂದು ಕಂಪನಿ ಅಂದಾಜಿಸಿದೆ. ಜಿಎಂ ಫೈನಾನ್ಶಿಯಲ್ ಸಂಸ್ಥೆಯು ಈ ಕಂಪನಿಯ ಟಾರ್ಗೆಟ್ ಬೆಲೆಯನ್ನು 535 ರೂಪಾಯಿಗೆ ಹೆಚ್ಚಿಸಿ, ಷೇರುಗಳನ್ನು ಖರೀದಿಸಲು ಸಲಹೆ ನೀಡಿದೆ. ಆದಾಗ್ಯೂ, ಟಾಟಾ ಟ್ರಸ್ಟ್ಸ್ ಮತ್ತು ಟಾಟಾ ಸನ್ಸ್ ನಡುವಿನ ಹಗ್ಗಜಗ್ಗಾಟ ಮುಂದುವರಿದರೆ ಆಡಳಿತ ಮಂಡಳಿಯ ನಿರ್ಧಾರಗಳು ಮತ್ತು ಹೂಡಿಕೆಗಳ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಹೂಡಿಕೆದಾರರಲ್ಲಿ ವ್ಯಕ್ತವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular