HomeLatest NewsTCS Nashik Case : 'ಶ್ರೀಕೃಷ್ಣನಂತೆ ಯಾವುದೇ ಮಗು ಜೈಲಿನಲ್ಲಿ ಜನಿಸಬಾರದು' ಎಂದು ನಿಧಾ ಖಾನ್‌ಗೆ...

TCS Nashik Case : ‘ಶ್ರೀಕೃಷ್ಣನಂತೆ ಯಾವುದೇ ಮಗು ಜೈಲಿನಲ್ಲಿ ಜನಿಸಬಾರದು’ ಎಂದು ನಿಧಾ ಖಾನ್‌ಗೆ ಜಾಮೀನು ನೀಡಿದ ಕೋರ್ಟ್

ನಾಸಿಕ್: ಶ್ರೀಕೃಷ್ಣನಂತೆ ಯಾವುದೇ ಮಗು ಜೈಲಿನಲ್ಲಿ ಜನಿಸುವಂತಹ ನೋವು ಮತ್ತು ಸಾಮಾಜಿಕ ಕಳಂಕವನ್ನು ಅನುಭವಿಸಬಾರದು” ಎಂದು ಅಭಿಪ್ರಾಯಪಟ್ಟ ನಾಸಿಕ್ ವಿಶೇಷ ನ್ಯಾಯಾಲಯವು ಟಿಸಿಎಸ್ (TCS) ನಾಸಿಕ್ ಧಾರ್ಮಿಕ ಮತಾಂತರ ಆರೋಪ ಪ್ರಕರಣದ ಆರೋಪಿ ನಿಧಾ ಖಾನ್ಗೆ ಜಾಮೀನು ಮಂಜೂರು ಮಾಡಿದೆ.

ಐದು ತಿಂಗಳ ಗರ್ಭಿಣಿಯಾಗಿರುವ ನಿಧಾ ಖಾನ್ ಅವರನ್ನು ಬಂಧಿಸಿದ ಎರಡು ತಿಂಗಳ ಬಳಿಕ ಸೋಮವಾರ ಜಾಮೀನಿನ ಮೇಲೆ ಬಿಡುಗಡೆ ಮಾಡಲು ನ್ಯಾಯಾಲಯ ಆದೇಶ ನೀಡಿದ್ದು, ಅದರ ವಿವರವಾದ ಆದೇಶ ಗುರುವಾರ ಲಭ್ಯವಾಗಿದೆ. ಗರ್ಭದಲ್ಲಿರುವ ಮಗುವಿನ ಹಿತದೃಷ್ಟಿಯಿಂದ ನ್ಯಾಯಾಂಗದ ವಿವೇಚನಾಧಿಕಾರವನ್ನು ಬಳಸುವುದು ನ್ಯಾಯೋಚಿತ ಎಂದು ವಿಶೇಷ ನ್ಯಾಯಾಧೀಶ ಕೆ.ಜಿ. ಜೋಶಿ ತಮ್ಮ ಆದೇಶದಲ್ಲಿ ಹೇಳಿದ್ದಾರೆ.

ನ್ಯಾಯಾಲಯ ಏನು ಹೇಳಿತು?
“ಅರ್ಜಿದಾರೆ ನಿಧಾ ಖಾನ್ ಐದು ತಿಂಗಳ ಗರ್ಭಿಣಿಯಾಗಿರುವುದು ವಿವಾದದ ವಿಷಯವಲ್ಲ. ಶ್ರೀಕೃಷ್ಣನಂತೆ ಜೈಲಿನಲ್ಲಿ ಜನಿಸುವ ನೋವು ಅಥವಾ ಅದಕ್ಕೆ ಸಂಬಂಧಿಸಿದ ಸಾಮಾಜಿಕ ಕಳಂಕವನ್ನು ಯಾವುದೇ ಮಗು ಅನುಭವಿಸಬಾರದು. ನವಜಾತ ಶಿಶುವಿನ ಉತ್ತಮ ಭವಿಷ್ಯ ಮತ್ತು ಕ್ಷೇಮಕ್ಕಾಗಿ ಅರ್ಜಿದಾರೆ ಪರವಾಗಿ ನ್ಯಾಯಾಂಗದ ವಿವೇಚನಾಧಿಕಾರ ಬಳಸುವುದು ಸೂಕ್ತ” ಎಂದು ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣವೇನು?
ನಾಸಿಕ್ನ ಟಿಸಿಎಸ್ ಬಿಪಿಒ ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ, ಧಾರ್ಮಿಕ ಮತಾಂತರಕ್ಕೆ ಒತ್ತಾಯ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಮಾನಸಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪದಡಿ ಮಾರ್ಚ್ 26ರಿಂದ ಏಪ್ರಿಲ್ 3ರವರೆಗೆ ಒಟ್ಟು 9 ಎಫ್ಐಆರ್ಗಳು ದಾಖಲಾಗಿದ್ದವು.ಈ ಪ್ರಕರಣದಲ್ಲಿ ಒಟ್ಟು ಎಂಟು ಮಂದಿ ಆರೋಪಿಗಳಿದ್ದು, ಅವರಲ್ಲಿ ನಿಧಾ ಖಾನ್ ಏಕೈಕ ಮಹಿಳಾ ಆರೋಪಿ. ದೇವಲಾಲಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ಮಾತ್ರ ಅವರ ಹೆಸರಿದೆ.

ಸಹೋದ್ಯೋಗಿಗೆ ಬುರ್ಖಾ, ಇಸ್ಲಾಂ ಧರ್ಮದ ಪುಸ್ತಕಗಳನ್ನು ನೀಡುವುದು, ಮೊಬೈಲ್ನಲ್ಲಿ ಧಾರ್ಮಿಕ ಆ್ಯಪ್ಗಳನ್ನು ಇನ್ಸ್ಟಾಲ್ ಮಾಡುವುದು ಹಾಗೂ ಇಸ್ಲಾಮಿಕ್ ಆಚರಣೆಗಳನ್ನು ಪಾಲಿಸುವಂತೆ ಪ್ರಭಾವ ಬೀರಿದ ಆರೋಪ ಅವರ ವಿರುದ್ಧ ಇದೆ. ಮುಂಗಡ ಜಾಮೀನು ಅರ್ಜಿ ತಿರಸ್ಕೃತವಾದ ಬಳಿಕ ಮೇ 7ರಂದು ಅವರನ್ನು ಛತ್ರಪತಿ ಸಂಭಾಜಿನಗರದಲ್ಲಿ ಬಂಧಿಸಲಾಗಿತ್ತು.

ಜಾಮೀನಿಗೆ ವಿಧಿಸಿದ ಷರತ್ತುಗಳು
ನ್ಯಾಯಾಲಯವು ನಿಧಾ ಖಾನ್ಗೆ ಕೆಲವು ಕಠಿಣ ಷರತ್ತುಗಳನ್ನು ವಿಧಿಸಿದೆ.
• ದೂರುದಾರರ ಕೆಲಸದ ಸ್ಥಳ ಅಥವಾ ನಿವಾಸದ ಸಮೀಪ ಹೋಗಬಾರದು.
• ದೂರುದಾರರು, ಸಾಕ್ಷಿದಾರರು ಅಥವಾ ಪ್ರಕರಣಕ್ಕೆ ಸಂಬಂಧಿಸಿದವರನ್ನು ಯಾವುದೇ ರೀತಿಯಲ್ಲಿ ಸಂಪರ್ಕಿಸಬಾರದು.
• ಸಾಕ್ಷ್ಯಾಧಾರಗಳ ಮೇಲೆ ಪ್ರಭಾವ ಬೀರುವಂತಿಲ್ಲ.
• ನ್ಯಾಯಾಲಯದ ಅನುಮತಿ ಇಲ್ಲದೆ ದೇಶ ತೊರೆಯಬಾರದು.
• ತಮ್ಮ ವಿಳಾಸ ಮತ್ತು ಸಂಪರ್ಕ ಸಂಖ್ಯೆಯನ್ನು ತನಿಖಾಧಿಕಾರಿಗಳಿಗೆ ತಿಳಿಸಬೇಕು.
ಈ ಷರತ್ತುಗಳನ್ನು ಉಲ್ಲಂಘಿಸಿದರೆ ಜಾಮೀನು ರದ್ದಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ.

ರಕ್ಷಣಾ ಪಕ್ಷದ ವಾದ
ನಿಧಾ ಖಾನ್ ಪರ ವಕೀಲ ರಾಹುಲ್ ಕಾಸ್ಲಿವಾಲ್, ಪ್ರಕರಣದ ಚಾರ್ಜ್ಶೀಟ್ ಈಗಾಗಲೇ ಸಲ್ಲಿಕೆಯಾಗಿರುವುದರಿಂದ ಅವರನ್ನು ಇನ್ನಷ್ಟು ದಿನ ಬಂಧನದಲ್ಲಿಡುವ ಅಗತ್ಯವಿಲ್ಲ ಎಂದು ವಾದಿಸಿದರು.ಇತರ ಎಫ್ಐಆರ್ಗಳಲ್ಲಿ ಅವರ ಹೆಸರು ಇಲ್ಲ. ಸಹಆರೋಪಿಗಳ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳಿಗೂ ಅವರಿಗೆ ಸಂಬಂಧವಿಲ್ಲ. ಅಲ್ಲದೆ, ಅವರ ವಿರುದ್ಧದ ಆರೋಪಕ್ಕೆ ಗರಿಷ್ಠ ಮೂರು ವರ್ಷಗಳ ಶಿಕ್ಷೆ ಮಾತ್ರ ಇದ್ದು, ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಅವರು ಸಿದ್ಧರಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಸರ್ಕಾರದ ವಾದ
ಸರ್ಕಾರದ ಪರ ವಕೀಲರು ಜಾಮೀನಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಬುರ್ಖಾ, ಇಸ್ಲಾಂ ಧರ್ಮದ ಪುಸ್ತಕ ಹಾಗೂ ಧಾರ್ಮಿಕ ಆ್ಯಪ್ಗಳ ಮೂಲಕ ದೂರುದಾರೆಯ “ಮೈಂಡ್ ವಾಶ್ ‘’ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು. ಅಲ್ಲದೆ, ಇದು ದೊಡ್ಡ ಸಂಚಿನ ಭಾಗವಾಗಿದ್ದು, ನಿಧಾ ಖಾನ್ ಕೂಡ ಅದರ ಭಾಗಿಯಾಗಿದ್ದಾರೆ ಎಂದು ವಾದಿಸಿದರು. ಆದರೆ ಈ ಆರೋಪವನ್ನು ನಿಧಾ ಖಾನ್ ತಳ್ಳಿಹಾಕಿದ್ದಾರೆ.

ನ್ಯಾಯಾಲಯದ ಅಭಿಪ್ರಾಯ
ಸಹಆರೋಪಿಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳಿದ್ದರೆ, ನಿಧಾ ಖಾನ್ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಆರೋಪಗಳಿವೆ ಎಂದು ನ್ಯಾಯಾಲಯ ಹೇಳಿದೆ. ಪ್ರಾಥಮಿಕ ಸಾಕ್ಷ್ಯಗಳಿದ್ದರೂ ಜಾಮೀನು ಅರ್ಜಿ ವಿಚಾರಣೆ ವೇಳೆ ಸಾಕ್ಷ್ಯಗಳ ಸಂಪೂರ್ಣ ಪರಿಶೀಲನೆ ನಡೆಸುವುದು ಸೂಕ್ತವಲ್ಲ. ತನಿಖೆ ಪೂರ್ಣಗೊಂಡಿದ್ದು, ಚಾರ್ಜ್ಶೀಟ್ ಸಲ್ಲಿಕೆಯಾಗಿದೆ ಎಂಬ ಕಾರಣದಿಂದ ಜಾಮೀನು ನೀಡಲಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular