ಚೆನ್ನೈ: ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಇಂದು ಒಂದು ಸುವರ್ಣ ಯುಗ ಅಂತ್ಯಗೊಂಡಿದೆ. ತಮಿಳು ಚಿತ್ರರಂಗದ ದಿಕ್ಸೂಚಿ, ಖ್ಯಾತ ಹಿರಿಯ ನಿರ್ದೇಶಕ, ನಿರ್ಮಾಪಕ ಹಾಗೂ ನಟ ಪದ್ಮಶ್ರೀ ಭಾರತಿರಾಜ (84) ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದಾಗಿ ಚೆನ್ನೈನ ನೀಲಂಕರೈನಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಕಳೆದ ಆರು ತಿಂಗಳ ಹಿಂದೆ ತೀವ್ರ ಶ್ವಾಸಕೋಶದ ಸೋಂಕು ಮತ್ತು ವಯೋಸಹಜ ಕಾಯಿಲೆಯಿಂದಾಗಿ ಚೆನ್ನೈನ ಎಂಜಿಎಂ (MGM) ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ (ICU) ದಾಖಲಾಗಿದ್ದ ಅವರು, ನಂತರ ಚೇತರಿಸಿಕೊಂಡು ವೈದ್ಯರ ಸಲಹೆಯಂತೆ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಚಿತ್ರರಂಗದ ಈ ಭೀಷ್ಮನ ಅಗಲಿಕೆಗೆ ಇಡೀ ದಕ್ಷಿಣ ಭಾರತೀಯ ಚಿತ್ರರಂಗ ಕಣ್ಣೀರಲ್ಲಿ ಮುಳುಗಿದ್ದು, ಕಮಲ್ ಹಾಸನ್, ರಜನಿಕಾಂತ್ ಸೇರಿದಂತೆ ಘಟಾನುಘಟಿ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
5 ದಶಕಗಳ ಅಖಂಡ ಸಿನಿಮಾ ಜರ್ನಿ:
40ಕ್ಕೂ ಹೆಚ್ಚು ಸಿನಿಮಾಗಳು: ಐದು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ 40 ಕ್ಕೂ ಹೆಚ್ಚು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿ, ಸಾಮಾಜಿಕ ಕಳಕಳಿಯ ಜೊತೆಗೆ ಕಮರ್ಷಿಯಲ್ ಯಶಸ್ಸು ತಂದುಕೊಟ್ಟರು.
‘R’ ಅಕ್ಷರದ ಸೆಂಟಿಮೆಂಟ್: ಭಾರತಿರಾಜ ಅವರಿಗೆ ಒಂದು ವಿಶಿಷ್ಟ ಸೆಂಟಿಮೆಂಟ್ ಇತ್ತು. ತಾವು ಚಿತ್ರರಂಗಕ್ಕೆ ಪರಿಚಯಿಸುವ ನಾಯಕಿಯರ ಹೆಸರು ಕಡ್ಡಾಯವಾಗಿ ‘R’ ಅಕ್ಷರದಿಂದಲೇ (ಉದಾಹರಣೆಗೆ: ಪ್ರಸಿದ್ಧ ನಟಿ ರಾಧಾ) ಆರಂಭವಾಗುವಂತೆ ನೋಡಿಕೊಳ್ಳುತ್ತಿದ್ದರು.
ಅದ್ಭುತ ನಟನಾಗಿ ಮಿಂಚು: ಕೊನೆಯ ದಿನಗಳಲ್ಲಿ ನಿರ್ದೇಶನದಿಂದ ದೂರವಿದ್ದರೂ ನಟನೆಯಲ್ಲಿ ಸಕ್ರಿಯರಾಗಿದ್ದರು. ಧನುಷ್ ನಟನೆಯ ಮೆಗಾ ಹಿಟ್ ‘ತಿರುಚಿತ್ರಾಂಬಲಂ’, ಆಯುಧ ಎಳುತ್ತು, ಈಶ್ವರನ್, ರಾಕಿ, ನಮ್ಮ ವೀಟ್ಟು ಪಿಳ್ಳೈ ಮುಂತಾದ ಸಿನಿಮಾಗಳಲ್ಲಿ ಪೋಷಕ ನಟನಾಗಿ ಅದ್ಭುತವಾಗಿ ನಟಿಸಿದ್ದರು.
ರಾಷ್ಟ್ರೀಯ ಗೌರವ: ಭಾರತ ಸರ್ಕಾರ ಇವರ ಸಿನಿಮಾ ಸೇವೆಯನ್ನು ಪರಿಗಣಿಸಿ ದೇಶದ ಅತ್ಯುನ್ನತ ಗೌರವವಾದ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ. ಜೊತೆಗೆ ಹಲವು ರಾಷ್ಟ್ರೀಯ ಪ್ರಶಸ್ತಿಗಳು ಇವರ ಮುಡಿಗೇರಿವೆ.

