HomeIndiaವಿದೇಶಿ ಮಹಿಳೆಯನ್ನು ದಿಟ್ಟಿಸಿ ನೋಡುತ್ತಿದ್ದ ಯುವಕರಿಗೆ ತರಾಟೆ ; ಛಾಯಾಗ್ರಾಹಕನ ಕಾರ್ಯಕ್ಕೆ ನೆಟ್ಟಿಗರ ಮೆಚ್ಚುಗೆ |...

ವಿದೇಶಿ ಮಹಿಳೆಯನ್ನು ದಿಟ್ಟಿಸಿ ನೋಡುತ್ತಿದ್ದ ಯುವಕರಿಗೆ ತರಾಟೆ ; ಛಾಯಾಗ್ರಾಹಕನ ಕಾರ್ಯಕ್ಕೆ ನೆಟ್ಟಿಗರ ಮೆಚ್ಚುಗೆ | Watch

ಭಾರತದ ಐತಿಹಾಸಿಕ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ವಿದೇಶಿ ಮಹಿಳಾ ಪ್ರವಾಸಿಗರು ಸಾರ್ವಜನಿಕವಾಗಿ ಎದುರಿಸುವ ಮುಜುಗರ, ಅತಿಯಾದ ಕಣ್ಣಿಡುವಿಕೆ ಹಾಗೂ ಹಿಂಬಾಲಿಸುವ ಅಸಭ್ಯ ವರ್ತನೆಗಳು ಪ್ರವಾಸೋದ್ಯಮ ಕ್ಷೇತ್ರದ ಘನತೆಗೆ ಕಪ್ಪುಚುಕ್ಕೆ ತರುತ್ತಿವೆ. ಅತಿಥಿ ದೇವೋಭವ ಎಂದು ನಂಬುವ ನೆಲದಲ್ಲೇ ವಿದೇಶಿ ಮಹಿಳೆಯರ ಸುರಕ್ಷತೆ ಮತ್ತು ಖಾಸಗಿತನಕ್ಕೆ ಧಕ್ಕೆ ಬರುತ್ತಿರುವ ಬಗ್ಗೆ ಹಲವು ಬಾರಿ ಕಳವಳಗಳು ವ್ಯಕ್ತವಾಗಿವೆ. ಇಂತಹದ್ದೇ ಒಂದು ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿರುವ ವಿಶ್ವವಿಖ್ಯಾತ ತಾಜ್ ಮಹಲ್ ಆವರಣದಲ್ಲಿ ನಡೆದಿದ್ದು, ವಿದೇಶಿ ಮಹಿಳೆಯನ್ನು ನಿರಂತರವಾಗಿ ದಿಟ್ಟಿಸಿ ಕಿರಿಕಿರಿ ಉಂಟುಮಾಡುತ್ತಿದ್ದ ಯುವಕರ ಗುಂಪೊಂದನ್ನು ಸ್ಥಳೀಯ ಛಾಯಾಗ್ರಾಹಕರೊಬ್ಬರು ತರಾಟೆಗೆ ತೆಗೆದುಕೊಂಡು ಓಡಿಸಿರುವ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಛಾಯಾಗ್ರಾಹಕ ಝೀ ಎಂಬುವವರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ವಿದೇಶಿ ಮಹಿಳಾ ಪ್ರವಾಸಿಗರೊಬ್ಬರು ತಾಜ್ ಮಹಲ್ ಎದುರು ಛಾಯಾಚಿತ್ರಗಳಿಗೆ ಪೋಸ್ ನೀಡುತ್ತಿರುವುದು ಕಂಡುಬರುತ್ತದೆ. ಆ ಸಂದರ್ಭದಲ್ಲಿ ಮೂವರು ಯುವಕರು ಆಕೆಯ ಪಕ್ಕದಲ್ಲೇ ನಿಂತು ಆಕೆಯನ್ನೇ ಅಸಹಜವಾಗಿ ದಿಟ್ಟಿಸಿ ನೋಡುತ್ತಾ ಹಿಂಬಾಲಿಸಲು ಯತ್ನಿಸುತ್ತಿದ್ದರು. ಇದನ್ನು ಗಮನಿಸಿದ ಛಾಯಾಗ್ರಾಹಕ ತಕ್ಷಣವೇ ಮಧ್ಯಪ್ರವೇಶಿಸಿ ಆ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನೀವು ತಾಜ್ ಮಹಲ್ ನೋಡಲು ಬಂದಿದ್ದರೆ ಅದನ್ನು ನೋಡಿ, ಅದನ್ನು ಬಿಟ್ಟು ಆಕೆಯ ಪಕ್ಕದಲ್ಲೇ ನಿಂತು ಏಕೆ ದಿಟ್ಟಿಸುತ್ತಿದ್ದೀರಿ ಎಂದು ಛಾಯಾಗ್ರಾಹಕ ನೇರವಾಗಿ ಪ್ರಶ್ನಿಸಿದ್ದಾರೆ. ಆರಂಭದಲ್ಲಿ ಅಲ್ಲಿಂದ ಕದಲಲು ನಿರಾಕರಿಸಿದ ಯುವಕರು, ತಾವೇನೂ ತಪ್ಪು ಮಾಡಿಲ್ಲವೆಂದು ವಾದಿಸಲು ಮುಂದಾಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಮತ್ತೊಬ್ಬ ವ್ಯಕ್ತಿ ಮಧ್ಯಪ್ರವೇಶಿಸಿ ಆ ಯುವಕರನ್ನು ಅಲ್ಲಿಂದ ಕಳುಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಘಟನೆಯ ಕುರಿತು ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಛಾಯಾಗ್ರಾಹಕ, ಜಗತ್ತಿನ ಮುಂಚೂಣಿ ಆರ್ಥಿಕತೆಯ ದೇಶದಲ್ಲಿ ಜನರಿಗೆ ಕನಿಷ್ಠ ನಾಗರಿಕ ಪ್ರಜ್ಞೆಯ ಅಗತ್ಯವಿದೆ. ವಿದೇಶಿ ಪ್ರವಾಸಿಗರನ್ನು ಹಿಂಬಾಲಿಸುವುದು, ಅವರನ್ನು ಅಹಿತಕರವಾಗಿ ದಿಟ್ಟಿಸುವುದು ನಮ್ಮ ಆತಿಥ್ಯ ಸಂಸ್ಕೃತಿಯಲ್ಲ. ಪ್ರವಾಸಿಗರ ವೈಯಕ್ತಿಕ ಜಾಗವನ್ನು ಗೌರವಿಸಿ, ಅವರು ಮುಕ್ತವಾಗಿ ದೇಶದ ಸೌಂದರ್ಯವನ್ನು ಆಸ್ವಾದಿಸಲು ಬಿಡಿ ಎಂದು ಬರೆದುಕೊಂಡಿದ್ದಾರೆ.

ಅಸಭ್ಯವಾಗಿ ವರ್ತಿಸಿದವರ ಎದುರು ನಿಂತು ವಿದೇಶಿ ಮಹಿಳೆಗೆ ರಕ್ಷಣೆ ನೀಡಿದ ಛಾಯಾಗ್ರಾಹಕನ ಧೈರ್ಯವನ್ನು ನೆಟ್ಟಿಗರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇಂತಹ ಕೆಟ್ಟ ನಡವಳಿಕೆಗಳಿಂದ ದೇಶದ ಹೆಸರು ಕೆಡುತ್ತದೆ, ಇಂತಹ ಕಿಡಿಗೇಡಿಗಳಿಗೆ ಸಾರ್ವಜನಿಕವಾಗಿ ಬುದ್ಧಿ ಕಲಿಸುವುದೇ ಸರಿಯಾದ ಮಾರ್ಗ ಎಂದು ಅನೇಕ ಬಳಕೆದಾರರು ಕಾಮೆಂಟ್ ಮೂಲಕ ಅಭಿಪ್ರಾಯಪಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular