ಟಿ20 ವಿಶ್ವಕಪ್ 2026ರ ಗುಂಪು ಹಂತದ ಪಂದ್ಯಗಳು ಈಗ ಅಂತಿಮ ಘಟ್ಟಕ್ಕೆ ತಲುಪಿದ್ದು, ಪ್ರತಿ ಪಂದ್ಯವೂ ತಂಡಗಳ ಭವಿಷ್ಯವನ್ನು ನಿರ್ಧರಿಸುತ್ತಿವೆ. ಇಂದು ಅಂದರೆ ಫೆಬ್ರವರಿ 17ರಂದು ನಡೆಯಲಿರುವ ಮೂರು ಪ್ರಮುಖ ಪಂದ್ಯಗಳು ಟೂರ್ನಿಯ ಸೂಪರ್ 8 ಹಂತದ ಚಿತ್ರಣವನ್ನು ಬದಲಿಸಲಿವೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಕೆನಡಾ ತಂಡಗಳು ಮುಖಾಮುಖಿಯಾಗುತ್ತಿವೆ.
ನ್ಯೂಜಿಲೆಂಡ್ ತಂಡಕ್ಕೆ ಈ ಪಂದ್ಯ ಅತ್ಯಂತ ನಿರ್ಣಾಯಕವಾಗಿದೆ. ಒಂದು ವೇಳೆ ಇಂದು ಕೆನಡಾ ವಿರುದ್ಧ ಕಿವೀಸ್ ಪಡೆ ಜಯ ಸಾಧಿಸಿದರೆ, ನೇರವಾಗಿ ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯಲಿದೆ. ಆದರೆ ನ್ಯೂಜಿಲೆಂಡ್‌ನ ಈ ಗೆಲುವು ಅಫ್ಘಾನಿಸ್ತಾನ ತಂಡಕ್ಕೆ ಮರಣಶಾಸನವಾಗಲಿದೆ. ಕಿವೀಸ್ ಗೆದ್ದರೆ ಅಫ್ಘಾನ್ ತಂಡ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವನ್ನು ಕೂದಲೆಳೆ ಅಂತರದಲ್ಲಿ ಸೋತಿದ್ದ ಅಫ್ಘಾನಿಸ್ತಾನ ಈಗ ನ್ಯೂಜಿಲೆಂಡ್ ಸೋಲಿಗಾಗಿ ಪ್ರಾರ್ಥಿಸುವಂತಾಗಿದೆ.
ಇನ್ನುಳಿದಂತೆ ಮಧ್ಯಾಹ್ನ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಐರ್ಲೆಂಡ್ ಮತ್ತು ಜಿಂಬಾಬ್ವೆ ತಂಡಗಳು ಸೆಣಸಲಿವೆ. ಜಿಂಬಾಬ್ವೆ ಈ ಪಂದ್ಯದಲ್ಲಿ ಗೆದ್ದರೆ ಆಸ್ಟ್ರೇಲಿಯಾ ತಂಡದ ಹಾದಿ ಮತ್ತಷ್ಟು ಕಠಿಣವಾಗಲಿದೆ. ಒಂದು ವೇಳೆ ಜಿಂಬಾಬ್ವೆ ಜಯಭೇರಿ ಬಾರಿಸಿದರೆ ಸೂಪರ್ 8 ಹಂತಕ್ಕೆ ಏರುವುದು ಬಹುತೇಕ ಖಚಿತವಾಗಲಿದ್ದು, ಆಸ್ಟ್ರೇಲಿಯಾ ತಂಡವು ಟೂರ್ನಿಯಿಂದ ಹೊರಬೀಳುವ ಆತಂಕ ಎದುರಿಸಲಿದೆ. ಸಂಜೆ ನಡೆಯಲಿರುವ ಮೂರನೇ ಪಂದ್ಯದಲ್ಲಿ ನೇಪಾಳ ಮತ್ತು ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.
ಇಂದಿನ ಪಂದ್ಯಗಳ ವಿವರ:
- ನ್ಯೂಜಿಲೆಂಡ್ vs ಕೆನಡಾ – ಬೆಳಿಗ್ಗೆ 11:00 (ಚೆನ್ನೈ)
- ಐರ್ಲೆಂಡ್ vs ಜಿಂಬಾಬ್ವೆ – ಮಧ್ಯಾಹ್ನ 3:00 (ಪಲ್ಲೆಕೆಲೆ)
- ಸ್ಕಾಟ್ಲೆಂಡ್ vs ನೇಪಾಳ – ಸಂಜೆ 7:00 (ಮುಂಬೈ)

