ಇಂದು ( ಫೆಬ್ರವರಿ 12 ) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ನಮೀಬಿಯಾ ತಂಡಗಳ ನಡುವೆ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 18ನೇ ಪಂದ್ಯ ನಡೆಯಲಿದೆ.
ಮೊದಲಿಗೆ ಉದ್ಘಾಟನೆಯ ದಿನ ವಾಂಖೆಡೆಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ವಿರುದ್ಧ ಗೆಲುವು ಸಾಧಿಸಿದ್ದ ಟೀಮ್ ಇಂಡಿಯಾ ಪಾಲಿಗೆ ಇದು ಎರಡನೇ ಪಂದ್ಯವಾಗಿದ್ದು, ಕಳೆದ ಪಂದ್ಯಕ್ಕೆ ಹೋಲಿಸಿದರೆ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಆಡುವ ಬಳಗದಲ್ಲಿ ಕೆಲ ಪ್ರಮುಖ ಬದಲಾವಣೆಗಳಾಗುವ ಸಾಧ್ಯತೆಗಳಿದೆ.
ಈ ಕುರಿತು ಭಾರತದ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಮಾತನಾಡಿದ್ದು, ತಂಡದಲ್ಲಾಗಬಹುದಾದ ಬದಲಾವಣೆಗಳ ಕುರಿತು ತಿಳಿಸಿದ್ದಾರೆ. ‘ಬುಮ್ರಾ ಮೊಹಮ್ಮದ್ ಸಿರಾಜ್ ಸ್ಥಾನದಲ್ಲಿ ಕಣಕ್ಕಿಳಿಯವ ಸಾಧ್ಯತೆ ಇದೆ. ಭಾರತದ ಮುಖ್ಯ ಆಡುವ ಬಳಗದಲ್ಲಿ ಜಸ್‌ಪ್ರೀತ್ ಬುಮ್ರಾ ಇದ್ದರು. ಸಿಕ್ಕ ಅವಕಾಶದಲ್ಲಿ ಸಿರಾಜ್ ಚೆನ್ನಾಗಿ ಆಡಿದರು. ಭಾರತದ ಯಾವುದೇ ವೇಗಿಗೆ ಸಮಸ್ಯೆಯಾದರೂ ಆ ಸ್ಥಾನವನ್ನು ಸಿರಾಜ್ ತುಂಬಲಿದ್ದಾರೆ. ಏನಾದರೂ ಇಂದು ಬುಮ್ರಾ ಕಣಕ್ಕಿಳಿಯಲು ಫಿಟ್ ಆದರೆ ಸಿರಾಜ್ ಜಾಗ ಮಾಡಿಕೊಡಲಿದ್ದಾರೆ’ ಎಂದರು.
ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಆಗಬೇಕಾದ ಕೆಲ ಬದಲಾವಣೆಗಳನ್ನು ತಿಳಿಸಿದ ಪಾರ್ಥಿವ್ ಯುಎಸ್‌ಎ ವಿರುದ್ಧದ ಪಂದ್ಯದಲ್ಲಿ ಬೇಗನೆ ವಿಕೆಟ್ ಕಳೆದುಕೊಂಡದ್ದನ್ನು ಉಲ್ಲೇಖಿಸಿ ರಿಂಕು ಸಿಂಗ್ ಬೇಗನೆ ಕಣಕ್ಕಿಳಿಯಬೇಕು ಎಂದರು. ‘ಭಾರತ ಬೇಗನೆ ಮೂರು ವಿಕೆಟ್ ಕಳೆದುಕೊಂಡರೆ ಶಿವಮ್ ದುಬೆ ಹಾಗೂ ಅಕ್ಷರ್ ಪಟೇಲ್‌ಗೂ ಮುಂಚೆ ರಿಂಕು ಸಿಂಗ್ ಬ್ಯಾಟಿಂಗ್‌ಗೆ ಬರಬೇಕು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಆತ ಸ್ಟ್ರೈಕ್ ಬದಲಿಸುತ್ತಾ ಸಮಯ ತೆಗೆದುಕೊಂಡು ಬಳಿಕ ಸಿಡಿಯುವ ಸಾಮರ್ಥ್ಯ ಹೊಂದಿದ್ದಾರೆ’ ಎಂದು ಪಟೇಲ್ ತಿಳಿಸಿದರು.

