ನಿನ್ನೆ (ಫೆಬ್ರವರಿ 28) ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಸೂಪರ್ 8 ಪಂದ್ಯದಲ್ಲಿ ಪಾಕಿಸ್ತಾನ 5 ರನ್‌ಗಳ ಗೆಲುವನ್ನು ದಾಖಲಿಸಿತು. ಈ ಮೂಲಕ ಸೆಮಿ ಫೈನಲ್ ಪ್ರವೇಶಿಸುವ ಆಸೆಯನ್ನು ಹೊಂದಿದ್ದ ಪಾಕಿಸ್ತಾನದ ಕನಸಿಗೆ ಲಂಕಾ ತಣ್ಣೀರು ಎರೆಚಿತು.
ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆರಿಸಿಕೊಂಡು ಪಾಕಿಸ್ತಾನ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿ ಶ್ರೀಲಂಕಾಗೆ 213 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಅಂತಿಮ ಹಂತದಲ್ಲಿ ಎಡವಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 207 ರನ್ ದಾಖಲಿಸಿತು.
ಪಾಕ್ ನೀಡಿದ ಬೃಹತ್ ಗುರಿ ಬೆನ್ನಟ್ಟಿದ ಶ್ರೀಲಂಕಾ ಕೇವಲ 33 ರನ್‌ಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಆರಂಭಿಕರಾದ ಪತುಮ್ ನಿಸ್ಸಂಕ 3 ರನ್ ಗಳಿಸಿದರೆ, ಕಮಿಲ್ ಮಿಶಾರಾ 26 ರನ್ ಗಳಿಸಿದರು. ಇನ್ನುಳಿದಂತೆ ಚರಿತ್ ಅಸಲಂಕ 25 ರನ್, ಕಮಿಂದು ಮೆಂಡಿಸ್ 3, ಜನಿತ್ ಲಿಯನಾಗೆ 5 ರನ್ ಕಲೆಹಾಕಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೆ ಮತ್ತೊಂದೆಡೆ ಪವನ್ ರತ್ನಾಯಕೆ 58 ರನ್ ಗಳಿಸಿ ದಸುನ್ ಶನಕ ಜತೆ 61 ರನ್‌ಗಳ ಜತೆಯಾಟವನ್ನಾಡಿದರು. ನಾಯಕ ದಸುನ್ ಶನಕ ಅಂತಿಮ ಹಂತದಲ್ಲಿ ಅಬ್ಬರಿಸಿದರು.
ಕೊನೆಯ ಓವರ್‌ನಲ್ಲಿ ಗೆಲ್ಲಲು 28 ರನ್ ಬೇಕಿದ್ದಾಗ ಒಂದು ಫೋರ್ ಹಾಗೂ ಹ್ಯಾಟ್ರಿಕ್ ಸಿಕ್ಸರ್ ಚಚ್ಚಿ ತಂಡವನ್ನು ಗೆಲ್ಲಿಸುವತ್ತ ದಾಪುಗಾಲಿಟ್ಟಿದ್ದರು. ಆದರೆ ಕೊನೆಯ ಎರಡು ಎಸೆತಗಳನ್ನು ಶಾಹಿನ್ ಶಾ ಅಫ್ರಿದಿ ಡಾಟ್ ಬಾಲ್ ಹಾಕಿದ ಕಾರಣ ಪಾಕ್ ಗೆಲುವು ಕಂಡಿತು. ಈ ಪೈಕಿ ಕೊನೆಯ ಎಸೆತ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿವಾದವನ್ನು ಹುಟ್ಟು ಹಾಕಿದ್ದು, ಅದು ಒಳ್ಳೆಯ ಡೆಲಿವರಿ ಅಲ್ಲ ಎಂದು ವಾದಿಸುತ್ತಿದ್ದಾರೆ. ಅದೊಂದು ವೈಡ್ ಬಾಲ್ ಆಗಿದ್ದು ಶನಕ ರಿವ್ಯೂ ತೆಗೆದುಕೊಂಡಿದ್ದರೆ ಫಲಿತಾಂಶವನ್ನು ಬದಲಿಸಬಹುದಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನು ರಿವ್ಯೂ ನಿರ್ಣಯ ತೆಗೆದುಕೊಳ್ಳದ ನಾಯಕ ದಸುನ್ ಶನಕ ಪೆವಿಲಿಯನ್ ತಲುಪುತ್ತಿದ್ದಂತೆ ಶ್ರೀಲಂಕಾದ ಬೌಲಿಂಗ್ ಕೋಚ್ ಲಸಿತ್ ಮಲಿಂಗ ಶನಕಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಲಿಂಗ ವೈಡ್ ಬಾಲ್ ಕುರಿತು ಕೋಪದಿಂದ ವಿವರಿಸುತ್ತಿರುವುದನ್ನು ಕಾಣಬಹುದಾಗಿದೆ.
ದಸುನ್ ಶನಕ 31 ಎಸೆತಗಳಲ್ಲಿ 2 ಫೋರ್ ಹಾಗೂ 8 ಸಿಕ್ಸರ್ ಸಹಿತ ಅಜೇಯ 76 ರನ್ ಬಾರಿಸಿದರು. ದುನಿತ್ ವೆಲ್ಲಲಗೆ ಅಜೇಯ 2 ರನ್ ಗಳಿಸಿದರು.

