ಐಸಿಸಿ ಟಿ20 ವಿಶ್ವಕಪ್ 2026 ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು, ಇಂದು ( ಮಾರ್ಚ್ 8 ) ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಟೂರ್ನಿಗೆ ತೆರೆ ಬೀಳಲಿದೆ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿದ್ದು, ಉಭಯ ತಂಡಗಳು ಟ್ರೋಫಿಗಾಗಿ ಕೊನೆಯ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿವೆ.
ಇನ್ನು ಈ ಪಂದ್ಯದ ಗೆಲುವು ಭಾರತದ ಪಾಲಿಗೆ ಮತ್ತೊಂದು ಟ್ರೋಫಿಯ ಗರಿಯನ್ನು ಮಾತ್ರ ತಂದುಕೊಡದೇ ಇನ್ನೂ ಅನೇಕ ದಾಖಲೆಗಳ ನಿರ್ಮಾಣಕ್ಕೆ ಕಾರಣವಾಗಲಿದೆ. ಭಾರತ ನ್ಯೂಜಿಲೆಂಡ್ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರೆ ಯಾವ ತಂಡದ ಕೈನಲ್ಲೂ ಆಗದಿರುವ ಈ ಕೆಳಕಂಡ ಮೂರು ದಾಖಲೆಗಳು ನಿರ್ಮಾಣವಾಗಲಿವೆ.
ಮೂರು ಬಾರಿ ಕಪ್ ಗೆದ್ದ ದಾಖಲೆ
2007 ಹಾಗೂ 2024ರಲ್ಲಿ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಗಳನ್ನು ಗೆದ್ದಿದ್ದ ಭಾರತ ಇಂದಿನ ಪಂದ್ಯದಲ್ಲಿ ಗೆದ್ದು ಚಾಂಪಿಯನ್ ಆದರೆ ಮೂರು ಬಾರಿ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿ ಗೆದ್ದ ಮೊದಲ ತಂಡ ಎಂಬ ಮಹಾ ದಾಖಲೆಯನ್ನು ಬರೆಯಲಿದೆ. ಇಲ್ಲಿಯವರೆಗೆ ಇಂಗ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ಭಾರತ ಈ ಮೂರು ತಂಡಗಳು ತಲಾ ಎರಡು ಬಾರಿ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದಿವೆ.
ಸತತ ಎರಡು ಟ್ರೋಫಿ
ಇನ್ನು ಇಲ್ಲಿಯವರೆಗೂ ಯಾವ ತಂಡವೂ ಸಹ ಸತತವಾಗಿ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಗೆದ್ದಿಲ್ಲ. ಕಳೆದ 2024ರ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಗೆದ್ದು ಹಾಲಿ ಚಾಂಪಿಯನ್ ಪಟ್ಟದಲ್ಲಿರುವ ಭಾರತ ಇಂದು ಗೆದ್ದರೆ ಸತತವಾಗಿ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿ ಗೆದ್ದ ಮೊದಲ ತಂಡ ಎನಿಸಿಕೊಳ್ಳಲಿದೆ.
ತವರಿನಲ್ಲಿ ಟ್ರೋಫಿ ಗೆದ್ದ ಮೊದಲ ತಂಡ
ಇಲ್ಲಿಯವರೆಗೆ ಒಟ್ಟು 9 ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಳು ನಡೆದಿದ್ದು, ಯಾವ ಬಾರಿಯೂ ಸಹ ಟೂರ್ನಿ ಆಯೋಜಿಸುವ ದೇಶ ಟ್ರೋಫಿಯನ್ನು ಗೆದ್ದಿಲ್ಲ. ಹೀಗಾಗಿ ಈ ಬಾರಿ ಭಾರತ ಚಾಂಪಿಯನ್ ಆದರೆ ಇದೇ ಮೊದಲ ಬಾರಿಗೆ ತಂಡವೊಂದು ತವರಿನಲ್ಲಿ ಟಿ ಟ್ವೆಂಟಿ ವಿಶ್ವಕಪ್ ಚಾಂಪಿಯನ್ ಆದ ಇತಿಹಾಸ ಬರೆಯಲಿದೆ.

