ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ( ಮಾರ್ಚ್ 5 ) ನಡೆಯುತ್ತಿರುವ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆರಿಸಿಕೊಂಡಿದ್ದು, ಭಾರತ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ. ಅದರಂತೆ ಬ್ಯಾಟಿಂಗ್‌ಗೆ ಇಳಿದ ಭಾರತ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್, ಇಶಾನ್ ಕಿಶನ್, ಶಿವಮ್ ದುಬೆ ಬೆಂಕಿ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಬಾರಿಸಿ ಇಂಗ್ಲೆಂಡ್‌ಗೆ 254 ರನ್‌ಗಳ ಕಠಿಣ ಗುರಿಯನ್ನು ನೀಡಿದೆ.
ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಕೇವಲ 9 ರನ್‌ಗೆ ವಿಕೆಟ್ ಒಪ್ಪಿಸಿದರು. ಹೀಗೆ ಭಾರತ 20 ರನ್‌ಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ಒಂದಾದ ಇಶಾನ್ ಕಿಶನ್ ಹಾಗೂ ಮತ್ತೋರ್ವ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಅಬ್ಬರದ ಆಟವನ್ನಾಡಿ 45 ಎಸೆತಗಳಲ್ಲಿ 97 ರನ್ ಜತೆಯಾಟವನ್ನಾಡಿ ಅಬ್ಬರಿಸಿದರು. ಇಶಾನ್ ಕಿಶನ್ 18 ಎಸೆತಗಳಲ್ಲಿ 39 ರನ್ ಬಾರಿಸಿದರು. ಕಿಶನ್ ವಿಕೆಟ್ ಒಪ್ಪಿಸಿದ ಬೆನ್ನಲ್ಲೇ ಕಣಕ್ಕಿಳಿದ ಶಿವಮ್ ದುಬೆ 25 ಎಸೆತಗಳಲ್ಲಿ 43 ರನ್ ಚಚ್ಚಿದರು. ಆರಂಭದಿಂದಲೂ ಅಬ್ಬರಿಸಿ ಬೊಬ್ಬರಿದ ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 89 ರನ್ ಬಾರಿಸಿದರು. ಇನ್ನುಳಿದಂತೆ ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 27, ಕೊನೆಯಲ್ಲಿ ಅಬ್ಬರಿಸಿದ ತಿಲಕ್ ವರ್ಮಾ 7 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 21 ರನ್ ಬಾರಿಸಿ ಅಬ್ಬರಿಸಿದರು. ಅಕ್ಸರ್ ಪಟೇಲ್ ಅಜೆಯ 2 ರನ್ ಗಳಿಸಿದರೆ, ಯಾವುದೇ ರನ್ ಕಲೆಹಾಕದ ವರುಣ್ ಚಕ್ರವರ್ತಿ ಅಜೇಯರಾಗಿ ಉಳಿದರು.
ಇಂಗ್ಲೆಂಡ್ ಪರ ಆದಿಲ್ ರಶೀದ್ ಹಾಗೂ ವಿಲ್ ಜ್ಯಾಕ್ಸ್ ತಲಾ ಎರಡು ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್ ಒಂದು ವಿಕೆಟ್ ಪಡೆದರು.

