ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಗ್ರೂಪ್ ಹಂತದ 36ನೇ ಪಂದ್ಯ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಭಾರತ ಹಾಗೂ ನೆದರ್ಲೆಂಡ್ಸ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆರಿಸಿಕೊಂಡಿದೆ. ಹೀಗೆ ಕಣಕ್ಕಿಳಿದ ಭಾರತದ ಪರ ಆರಂಭಿಕರಾಗಿ ಎಡಗೈ ಆಟಗಾರರಾದ ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ಕಣಕ್ಕಿಳಿದರು.
ಸ್ಟ್ರೈಕ್ ಆರಂಭಿಸಿದ ಅಭಿಷೇಕ್ ಶರ್ಮಾ ಕೇವಲ ಮೂರು ಎಸೆತಗಳನ್ನು ಎದುರಿಸಿ ವಿಕೆಟ್ ಒಪ್ಪಿಸಿದರು. ಆರ್ಯನ್ ದತ್ ಎಸೆದ ಮೊದಲ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಯಾವುದೇ ರನ್ ಗಳಿಸದ ಅಭಿಷೇಕ್ ಶರ್ಮಾ ಮೂರನೇ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು.
ಈ ಮೂಲಕ ಅಭಿಷೇಕ್ ಶರ್ಮಾ ಈ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿದ ಎಲ್ಲ ಮೂರು ಪಂದ್ಯಗಳಲ್ಲಿಯೂ ಡಕ್‌ಔಟ್ ಆಗುವ ಮೂಲಕ ಹ್ಯಾಟ್ರಿಕ್ ಶೂನ್ಯ ಸುತ್ತಿದ್ದಾರೆ. ಯುಎಸ್‌ಎ ವಿರುದ್ಧದ ತಂಡದ ಮೊದಲ ಪಂದ್ಯದಲ್ಲಿ ಆಡಿದ ಮೊದಲ ಪಂದ್ಯವೇ ಕ್ಯಾಚ್ ನೀಡಿದ್ದ ಅಭಿಷೇಕ್ ಶರ್ಮಾ ಗೋಲ್ಡನ್ ಡಕ್‌ಔಟ್ ಆಗಿದ್ದರು. ಬಳಿಕ ಹೊಟ್ಟೆ ನೋವಿನ ಕಾರಣದಿಂದಾಗಿ ನಮೀಬಿಯಾ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದ ಅಭಿಷೇಕ್ ಶರ್ಮಾ ನಂತರ ಪಾಕ್ ವಿರುದ್ಧ ಕಣಕ್ಕಿಳಿದು ನಾಲ್ಕು ಎಸೆತಗಳನ್ನು ಎದುರಿಸಿ ಸಲ್ಮಾನ್ ಅಲಿ ಆಘಾ ಎಸೆತದಲ್ಲಿ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ್ದರು.
ಹೀಗೆ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಡಕ್‌ಔಟ್ ಆಗಿರುವ ಅಭಿಷೇಕ್ ಶರ್ಮಾ ಟೂರ್ನಿಯ ಫಾರ್ಮ್ ತಲೆನೋವಾಗಿ ಪರಿಣಮಿಸಿದ್ದು, ಸೂಪರ್ 8 ಸುತ್ತಿಗೆ ಸರಿಯಾದ ಹೋಮ್‌ವರ್ಕ್ ಮಾಡಿ ಕಣಕ್ಕಿಳಿಯಬೇಕಿದೆ.

