ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಸುತ್ತು ಇಂದಿನಿಂದ ( ಫೆಬ್ರವರಿ 21 ) ಆರಂಭವಾಗಿದೆ. ಈ ಸುತ್ತಿನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆರಿಸಿಕೊಂಡಿದ್ದು, ಟಾಸ್ ಆದ ಬೆನ್ನಲ್ಲೇ ಕೊಲಂಬೊ ನಗರದಲ್ಲಿ ವರುಣನ ಆಗಮನವಾಗಿ ಗ್ರೌಂಡ್‌ಮ್ಯಾನ್‌ಗಳು ಪ್ರೇಮದಾಸ ಗ್ರೌಂಡ್‌ಗೆ ಕವರ್ ಹಾಕಿ ಮುಚ್ಚಿದ್ದಾರೆ.
ಹೀಗೆ ರೋಚಕ ಸೂಪರ್ 8 ಸುತ್ತಿನ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, ಪಂದ್ಯಕ್ಕಾಗಿ ಕಾಯುತ್ತಿದ್ದ ಕ್ರಿಕೆಟ್ ಪ್ರಿಯರಿಗೆ ನಿರಾಸೆಯುಂಟಾಗಿದೆ. ಸದ್ಯ 7.45ರ ಸಮಯಕ್ಕೆ ಇನ್ನೂ ಸಹ ಮಳೆಯ ಪ್ರಮಾಣ ತಗ್ಗದೇ ಇದ್ದು, ಹವಾಮಾನ ವರದಿಗಳು ಇನ್ನೂ ಕೆಲ ಕಾಲ ಮಳೆಯಾಗಲಿದೆ ಎಂಬ ವರದಿ ನೀಡಿವೆ.
ಹೀಗಾಗಿ ಈ ಪಂದ್ಯ ನಡೆಯುತ್ತಾ ಎಂಬ ಪ್ರಶ್ನೆ ಎದ್ದಿದ್ದು, ಎಷ್ಟು ಸಮಯದ ನಂತರ ಓವರ್ ಕಡಿತಗೊಳ್ಳಲು ಆರಂಭವಾಗುತ್ತದೆ ಹಾಗೂ 5 ಓವರ್ ಪಂದ್ಯ ನಡೆಸಲು ಸಮಯದ ಗಡುವು ಎಷ್ಟು ಎಂಬ ಮಾಹಿತಿ ಹೊರಬಿದ್ದಿದೆ.
ಸ್ಥಳೀಯ ಕಾಲಮಾನದ ಪ್ರಕಾರ 8.10ರಿಂದ ಓವರ್ ಕಡಿತಗೊಳ್ಳಲು ಆರಂಭವಾಗಲಿದ್ದು, 5 ಓವರ್ ಪಂದ್ಯ ನಡೆಸಲು 10.16ರೊಳಗೆ ಮಳೆ ನಿಂತು ಪಿಚ್ ತಯಾರಾಗಬೇಕಿದೆ. ಒಂದು ವೇಳೆ ಈ ಸಮಯಕ್ಕೆ ಪಿಚ್ ಆಡಲು ಯೋಗ್ಯವಲ್ಲ ಎಂದು ತಿಳಿದುಬಂದರೆ ಪಂದ್ಯ ರದ್ದಾಗಿ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕ ಸಿಗಲಿದೆ.
ಪಾಕಿಸ್ತಾನ ಆಡುವ ಬಳಗ: ಸಾಹಿಬ್‌ಜಾದಾ ಫರ್ಹಾನ್, ಸೈಮ್ ಅಯ್ಯೂಬ್, ಸಲ್ಮಾನ್ ಆಘಾ (ನಾಯಕ), ಬಾಬರ್ ಆಝಂ, ಫಖರ್ ಜಮಾನ್, ಉಸ್ಮಾನ್ ಖಾನ್ (ವಿಕೆಟ್‌ಕೀಪರ್), ಶದಾಬ್ ಖಾನ್, ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಸಲ್ಮಾನ್ ಮಿರ್ಜಾ, ಉಸ್ಮಾನ್ ತಾರಿಕ್
ನ್ಯೂಜಿಲೆಂಡ್ ಇನ್ನಿಂಗ್ಸ್: ಟಿಮ್ ಸೀಫರ್ಟ್ (ವಿಕೆಟ್‌ಕೀಪರ್), ಫಿನ್ ಅಲೆನ್, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್‌ಮನ್, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಜೇಮ್ಸ್ ನೀಶಾಮ್, ಮ್ಯಾಟ್ ಹೆನ್ರಿ, ಇಶ್ ಸೋಧಿ, ಲಾಕಿ ಫರ್ಗ್ಯೂಸನ್

