ಇಂದಿನ ವೇಗದ ಜೀವನಶೈಲಿಯಲ್ಲಿ ತಲೆನೋವು, ಆಯಾಸ, ನೆನಪಿನ ಶಕ್ತಿ ಕುಂಠಿತವಾಗುವುದು ಮುಂತಾದ ಸಮಸ್ಯೆಗಳನ್ನು ಹಲವರು ಸಾಮಾನ್ಯವೆಂದು ನಿರ್ಲಕ್ಷ್ಯ ಮಾಡುತ್ತಾರೆ.ಒತ್ತಡ, ಮೈಗ್ರೇನ್, ವಯಸ್ಸಿನ ಪರಿಣಾಮ ಅಥವಾ ನಿದ್ರಾಹೀನತೆಯ ಕಾರಣದಿಂದಲೇ ಇಂತಹ ಸಮಸ್ಯೆಗಳು ಬರುತ್ತವೆ ಎಂದು ಭಾವಿಸಿ ನೋವು ನಿವಾರಕ ಮಾತ್ರೆಗಳನ್ನು ಸೇವಿಸಿ ಸುಮ್ಮನಾಗುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಇದೇ ಲಕ್ಷಣಗಳು ಮೆದುಳಿನ ಗಡ್ಡೆ (Brain Tumor) ಎಂಬ ಗಂಭೀರ ಕಾಯಿಲೆಯ ಆರಂಭಿಕ ಸೂಚನೆಗಳಾಗಿರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬ್ರೇನ್ ಟ್ಯೂಮರ್ ಚಿಕಿತ್ಸೆಗೆ ಹಲವು ಆಧುನಿಕ ತಂತ್ರಜ್ಞಾನಗಳು ಲಭ್ಯವಿದ್ದರೂ, ಸರಿಯಾದ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸದ ಕಾರಣ ಅನೇಕ ರೋಗಿಗಳಲ್ಲಿ ಚಿಕಿತ್ಸೆ ವಿಳಂಬವಾಗುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಆರಂಭಿಕ ಹಂತದಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು ಸಾಮಾನ್ಯ ಆರೋಗ್ಯ ಸಮಸ್ಯೆಗಳಂತೆ ಕಂಡುಬರುವುದರಿಂದ ಹಲವರು ತಿಂಗಳುಗಟ್ಟಲೆ ಅವುಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ.
ಈ ಲಕ್ಷಣಗಳು ಕಂಡರೆ ನಿರ್ಲಕ್ಷ್ಯ ಮಾಡಬೇಡಿ
- ಪದೇ ಪದೇ ತಲೆನೋವು
- ಆಗಾಗ ವಾಂತಿ ಆಗುವುದು
- ದೃಷ್ಟಿ ಮಸುಕಾಗುವುದು ಅಥವಾ ಕಡಿಮೆಯಾಗುವುದು
- ಯಾವುದೇ ಕಾರಣವಿಲ್ಲದೆ ಫಿಟ್ಸ್ (ಮೂರ್ಛೆ) ಬರುವುದು
- ನೆನಪಿನ ಶಕ್ತಿ ಕುಂದುವುದು
- ವ್ಯಕ್ತಿತ್ವದಲ್ಲಿ ಬದಲಾವಣೆ
- ನಡೆಯುವಾಗ ಸಮತೋಲನ ಕಳೆದುಕೊಳ್ಳುವುದು
- ಕೈ ಅಥವಾ ಕಾಲುಗಳಲ್ಲಿ ಬಲಹೀನತೆ
ಈ ಲಕ್ಷಣಗಳನ್ನು ಸಾಮಾನ್ಯ ಸಮಸ್ಯೆಗಳೆಂದು ಪರಿಗಣಿಸಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಅನೇಕರು ತಲೆನೋವನ್ನು ಕೆಲಸದ ಒತ್ತಡಕ್ಕೆ, ನೆನಪಿನ ಶಕ್ತಿ ಕುಂದುವುದನ್ನು ವಯಸ್ಸಿನ ಪರಿಣಾಮಕ್ಕೆ, ನಡೆಯುವಾಗ ತಡಬಡಿಸುವುದನ್ನು ಆಯಾಸಕ್ಕೆ ಕಾರಣವೆಂದು ಭಾವಿಸುತ್ತಾರೆ. ಹೀಗೆ ಸ್ವತಃ ಕಾರಣಗಳನ್ನು ಊಹಿಸುವುದರಿಂದ ನಿಜವಾದ ಕಾಯಿಲೆ ಪತ್ತೆಯಾಗಲು ವಿಳಂಬವಾಗುತ್ತದೆ. ಸ್ಕ್ಯಾನಿಂಗ್ ಪರೀಕ್ಷೆ ಮಾಡಿಸಿಕೊಳ್ಳುವ ವೇಳೆಗೆ ಕಾಯಿಲೆ ಗಂಭೀರ ಹಂತ ತಲುಪುವ ಸಾಧ್ಯತೆಯೂ ಇದೆ.
ಬ್ರೇನ್ ಟ್ಯೂಮರ್ ಎಂದರೆ ಜೀವಕ್ಕೆ ಅಪಾಯವೇ ಎಂಬ ತಪ್ಪು ಕಲ್ಪನೆಯೂ ಹಲವರಲ್ಲಿದೆ. ಈ ಭಯದಿಂದ ಕೆಲವರು ಪರೀಕ್ಷೆ ಮಾಡಿಸಿಕೊಳ್ಳುವುದಕ್ಕೂ ಹಿಂದೇಟು ಹಾಕುತ್ತಾರೆ. ಆದರೆ ಎಲ್ಲಾ ಬ್ರೇನ್ ಟ್ಯೂಮರ್‌ಗಳು ಕ್ಯಾನ್ಸರ್ ಆಗಿರುವುದಿಲ್ಲ. ಬಹುತೇಕ ಗಡ್ಡೆಗಳು ನಿರಾಪಾಯ (Benign) ಸ್ವರೂಪದ್ದಾಗಿರುತ್ತವೆ ಎಂದು ತಜ್ಞರು ತಿಳಿಸುತ್ತಾರೆ. ಕ್ಯಾನ್ಸರ್ ಆಗಿದ್ದರೂ ಸಹ ಗಡ್ಡೆಯ ಪ್ರಕಾರ, ಅದು ಇರುವ ಸ್ಥಳ ಹಾಗೂ ಎಷ್ಟು ಬೇಗ ಪತ್ತೆಯಾಯಿತು ಎಂಬುದರ ಮೇಲೆ ಚಿಕಿತ್ಸೆಯ ಫಲಿತಾಂಶ ಅವಲಂಬಿತವಾಗಿರುತ್ತದೆ.
ಆರಂಭಿಕ ಹಂತದಲ್ಲೇ ಪತ್ತೆಯಾದರೆ ಚಿಕಿತ್ಸೆ ಯಶಸ್ವಿಯಾಗುವ ಸಾಧ್ಯತೆ ಹೆಚ್ಚು
ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ ಚಿಕಿತ್ಸೆ ಯಶಸ್ವಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.ಪ್ರಸ್ತುತ ಶಸ್ತ್ರಚಿಕಿತ್ಸೆಯನ್ನು ಹೆಚ್ಚು ಸುರಕ್ಷಿತ ಮತ್ತು ನಿಖರವಾಗಿ ನಡೆಸಲು ನ್ಯೂರೋ ನ್ಯಾವಿಗೇಶನ್ (Neuronavigation), ಇಂಟ್ರಾ-ಆಪರೇಟಿವ್ ನ್ಯೂರೋ ಮಾನಿಟರಿಂಗ್ (Intra-operative Neuro Monitoring), ಫ್ಲೂರೋಸೆನ್ಸ್ ಗೈಡೆಡ್ ಸರ್ಜರಿ (Fluorescence Guided Surgery), ಅವೇಕ್ ಕ್ರೇನಿಯೋಟಮಿ (Awake Craniotomy), ಮಿನಿಮಲಿ ಇನ್ವೇಸಿವ್ ಎಂಡೋಸ್ಕೋಪಿಕ್ ವಿಧಾನಗಳು ಸೇರಿದಂತೆ ಹಲವು ಅತ್ಯಾಧುನಿಕ ತಂತ್ರಜ್ಞಾನಗಳು ಲಭ್ಯವಿವೆ.
ಇದರ ಜೊತೆಗೆ, ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ಶಸ್ತ್ರಚಿಕಿತ್ಸೆಗೂ ಮುನ್ನ ಚಿಕಿತ್ಸೆಯ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸುವ ಅವಕಾಶಗಳೂ ಹೆಚ್ಚುತ್ತಿವೆ.ಆದರೆ ಎಷ್ಟೇ ಆಧುನಿಕ ತಂತ್ರಜ್ಞಾನಗಳಿದ್ದರೂ, ರೋಗಿಯು ಸರಿಯಾದ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿದಾಗ ಮಾತ್ರ ಅದರ ಸಂಪೂರ್ಣ ಪ್ರಯೋಜನ ದೊರೆಯುತ್ತದೆ.
ಆದ್ದರಿಂದ ತಲೆನೋವು ಅಥವಾ ನರಮಂಡಲಕ್ಕೆ ಸಂಬಂಧಿಸಿದ ಇತರೆ ಲಕ್ಷಣಗಳು ಪದೇ ಪದೇ ಕಾಣಿಸಿಕೊಂಡರೆ ಅವುಗಳನ್ನು ನಿರ್ಲಕ್ಷ್ಯ ಮಾಡದೆ ತಕ್ಷಣ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ. ಜನರಲ್ಲಿ ಜಾಗೃತಿ ಹೆಚ್ಚುವುದು ಹಾಗೂ ಆರಂಭಿಕ ಹಂತದಲ್ಲೇ ಲಕ್ಷಣಗಳನ್ನು ಗುರುತಿಸುವುದರಿಂದ ಬ್ರೇನ್ ಟ್ಯೂಮರ್ ಚಿಕಿತ್ಸೆಯಲ್ಲಿ ಉತ್ತಮ ಫಲಿತಾಂಶಗಳನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

