ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಡುವಿನ ಜಟಾಪಟಿ ಮುಂದುವರೆದಿದೆ. ಮುಖ್ಯಮಂತ್ರಿಗಳಿಗೆ 2 ಸವಾಲು ಹಾಕಿರುವ ಸ್ವಾಮೀಜಿ 40 ದಿನದ ಗಡುವು ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಧರ್ಮ ಮತ್ತು ಅಧಿಕಾರದ ನಡುವೆ ಜಟಾಪಟಿ ನಡೆಯುತ್ತಿದೆ. ಜ್ಯೋತಿರ್ಮಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಡುವಿನ ವಾಕ್ಸಮರ ಮತ್ತೊಂದು ಹಂತ ತಲುಪಿದೆ.
ಯೋಗಿಗೆ 2 ಸಾವಲುಗಳು: ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಹಸುವನ್ನು’ರಾಜ್ಯ ತಾಯಿ’ಎಂದು ಘೋಷಿಸಬೇಕು. 40 ದಿನಗಳಲ್ಲಿ ಗೋಮಾಂಸ ರಫ್ತು ನಿಷೇಧಿಸಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ಸವಾಲು ಹಾಕಿದ್ದಾರೆ.
ಈ ಸವಾಲನ್ನು ಜಾರಿಗೆ ತರಲು ವಿಫಲವಾದರೆ ಮಾರ್ಚ್ 11ರಂದು ಲಕ್ನೋದಲ್ಲಿ ಸಂತರು ಜಮಾಯಿಸಿ ಮುಖ್ಯಮಂತ್ರಿಯನ್ನು’ನಕಲಿ ಹಿಂದೂ’ಎಂದು ಘೋಷಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
“ಹಿಂದೂ ಧರ್ಮದ ಕುರಿತು ನಿಮ್ಮ ಬದ್ಧತೆಯನ್ನು ಸಾಬೀತು ಮಾಡಿ, 40 ದಿನಗಳ ಒಳಗಾಗಿ ಗೋ ಹತ್ಯೆಯನ್ನು ನಿಲ್ಲಿಸಿ. ಆಗ ನೀವೊಬ್ಬ ಹಿಂದೂ ಅನುಯಾಯಿ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.
“ಉತ್ತರ ಪ್ರದೇಶ ರಾಜ್ಯ ದೇಶದಲ್ಲಿಯೇ ಶೇ 40ರಷ್ಟು ಗೋಮಾಂಸವನ್ನು ರಫ್ತು ಮಾಡುತ್ತದೆ. ಎಮ್ಮೆಗಳ ಮಾಂಸ ಎಂದು ಗೋ ಮಾಂಸವನ್ನು ಕಳಿಸಲಾಗುತ್ತದೆ. ರಾಜ್ಯದಲ್ಲಿರುವ ಎಮ್ಮೆಗಳ ಸಂಖ್ಯೆಗೂ ಮಾಂಸದ ರಫ್ತು ಅಂಕಿ ಸಂಖ್ಯೆಗಳಿಗೂ ತಾಳೆಯೇ ಆಗುವುದಿಲ್ಲ. ಹಸುವನ್ನು ಕೊಂದು ಗೋಮಾಂಸ ರಫ್ತು ಮಾಡಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
“ಮಹಾರಾಷ್ಟ್ರ ಸರ್ಕಾರ ಹಸುವನ್ನು ರಾಜ್ಯ ತಾಯಿ ಎಂದು ಘೋಷಣೆ ಮಾಡಿದೆ. ನೇಪಾಳ ದೇಶ ಹಸುವಿಗೆ ರಾಷ್ಟ್ರೀಯ ಪ್ರಾಣಿ ಸ್ಥಾನಮಾನ ನೀಡಿದೆ. ಇದೇ ಮಾದರಿಯ ಗೌರವ ಉತ್ತರ ಪ್ರದೇಶದಲ್ಲಿ ಸಿಗಬೇಕಿದೆ” ಎಂದು ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಪ್ರಯಾಗ್ ರಾಜ್ನ ಮಾಘ ಮೇಳದ ಸಮಯದಿಂದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಮತ್ತು ಯೋಗಿ ಆದಿತ್ಯನಾಥ್ ನಡುವೆ ಜಟಾಪಟಿ ನಡೆಯುತ್ತಿದೆ. ಮಾಘ ಮೇಳದಲ್ಲಿ ಸ್ನಾನ ಮಾಡಲು ಕಾಲ್ನಡಿಗೆ ಮೂಲಕ ತೆರಳುವಂತೆ ಮಾಡಿದರು ಎಂಬುದು ಸ್ವಾಮೀಜಿ ಆರೋಪವಾಗಿದೆ.
ಆದ್ದರಿಂದ ಅವರು ಇನ್ನು ಖಂಡಿಸಿ ಶಂಕರಾಚಾರ್ಯ ಕ್ಯಾಂಪ್ನಲ್ಲಿ ಜನವರಿ 18ರಿಂದ ಸತ್ಯಾಗ್ರಹ ಕೈಗೊಂಡಿದ್ದರು. ಬುಧವಾರ ಪತ್ರಿಭಟನೆ ಅಂತ್ಯಗೊಳಿಸಿದ ಅವರು ಅಲ್ಲಿಂದ ನಿರ್ಗಮಿಸಿದ್ದರು.
“11 ದಿನ ಉಪವಾಸ ಮಾಡಿದರೂ ಯಾವ ಅಧಿಕಾರಿಯೂ ಪುಣ್ಯ ಸ್ನಾನ ಮಾಡುವಂತೆ ಬಂದು ಆಹ್ವಾನ ನೀಡಲಿಲ್ಲ. ಈಗ ಬಹಳ ತಡವಾಗಿದೆ. ಮುಂದಿನ ವರ್ಷ ಮಾಘ ಮೇಳದ ಸಂದರ್ಭದಲ್ಲಿ ಪವಿತ್ರ ಸ್ನಾನ ಮಾಡುತ್ತೇನೆ” ಎಂದು ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ, “ಯೋಗಿ ಆದಿತ್ಯನಾಥ್ ಈಗ ಸಂತರಲ್ಲ. ಅವರು ಮುಖ್ಯಮಂತ್ರಿಗಳು. ಈಗ ಅವರು ರಾಜ್ಯದ ಶಿಕ್ಷಣ, ಮೂಲ ಸೌಕರ್ಯ ಅಭಿವೃದ್ಧಿ ಕುರಿತು ಆಲೋಚಿಸಬೇಕು. ಧರ್ಮದ ವಿಚಾರವನ್ನು ಅವರು ಸಾಧುಗಳಿಗೆ ಬಿಡಬೇಕು” ಎಂದು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದರು.
ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಮತ್ತು ಯೋಗಿ ಆದಿತ್ಯನಾಥ್ ನಡುವಿನ ವಾಕ್ಸಮರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈಗ ಸಿಎಂ ಯೋಗಿಗೆ ಸ್ವಾಮೀಜಿ ಮತ್ತೆ ಎರಡು ಸವಾಲು ಹಾಕಿದ್ದಾರೆ.

