ಪ್ರಸ್ತುತ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಗೆ ಇಂದು ( ಮಾರ್ಚ್ 8 ) ತೆರೆಬೀಳಲಿದೆ. ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಟ್ರೋಫಿಗಾಗಿ ಕೊನೆಯ ಸೆಣಸಾಟ ನಡೆಸಲಿವೆ.
ಒಂದೆಡೆ ಟೀಂ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಎತ್ತಿಹಿಡಿಯುವ ಯೋಜನೆಯಲ್ಲಿದ್ದರೆ, ಮತ್ತೊಂದೆಡೆ ನ್ಯೂಜಿಲೆಂಡ್ ಚೊಚ್ಚಲ ಟ್ರೋಫಿ ಗೆಲ್ಲುವ ಹಂಬಲದಲ್ಲಿದೆ.
ಈ ಹೈವೋಲ್ಟೇಜ್ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಎಂಬ ಲೆಕ್ಕಾಚಾರಗಳು ನಡೆಯುತ್ತಿದ್ದು, ಮತ್ತೊಂದೆಡೆ ಉಭಯ ತಂಡಗಳ ನಾಯಕರು ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಪರಸ್ಪರ ಕೌಂಟರ್ ಕೊಟ್ಟುಕೊಂಡಿದ್ದಾರೆ.
ಮೊದಲಿಗೆ ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್ ಭಾರತದ ಅಭಿಮಾನಿಗಳ ಬಾಯಿ ಮುಚ್ಚಿಸಿ ಸೈಲೆಂಟ್ ಮಾಡಲಿದ್ದೇವೆ, ಅದೇ ನಮ್ಮ ಗುರಿ ಎಂದು ಹೇಳಿಕೆ ನೀಡಿದ್ದರು. ಇದು 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ನೀಡಿದ್ದ ಹೇಳಿಕೆಯ ಹಾಗೆಯೇ ಇತ್ತು. ಕಮಿನ್ಸ್ ಸಹ ದೊಡ್ಡ ಕ್ರೌಡ್ ಸೈಲೆಂಟ್ ಆಗುವುದಕ್ಕಿಂತ ಇನ್ನೇನು ತೃಪ್ತಿ ಕೊಡುವುದಿಲ್ಲ ಎಂದಿದ್ದರು. ತಮ್ಮ ಹೇಳಿಕೆಯಂತೆ ಕೆಲಸವನ್ನು ಮಾಡಿ ಮುಗಿಸಿ ಟ್ರೋಫಿ ಗೆದ್ದಿದ್ದರು.
ಇನ್ನು ಕೇವಲ ಸ್ಯಾಂಟ್ನರ್ ಮಾತ್ರವಲ್ಲದೇ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡದ ಆಟಗಾರ ಸ್ಯಾಮ್ ಕರನ್ ಸಹ ಇದೇ ರೀತಿಯ ಹೇಳಿಕೆ ನೀಡಿದ್ದರು.
ಕಿವೀಸ್ ನಾಯಕ ಸ್ಯಾಂಟ್ನರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸೂರ್ಯ ಎಲ್ಲರೂ ಇದೇ ರೀತಿಯ ಹೇಳಿಕೆಯನ್ನು ನೀಡುವುದೇ ಆಗಿದೆ, ಏನಾದರೂ ಹೊಸ ಹೇಳಿಕೆಯೊಂದಿಗೆ ಬರಲು ಹೇಳಿ ಎಂದು ತಿರುಗೇಟು ಕೊಟ್ಟಿದ್ದಾರೆ.

