ರಾಷ್ಟ್ರಗೀತೆ ‘ವಂದೇ ಮಾತರಂ’ ಅನ್ನು ಸಂಪೂರ್ಣವಾಗಿ ಹಾಡಲು ಆಕ್ಷೇಪ ವ್ಯಕ್ತಪಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ವಂದೇ ಮಾತರಂ’ನ ಒಂದು ಅಥವಾ ಎಲ್ಲಾ ಚರಣಗಳನ್ನು ಹಾಡಲು ನಿರಾಕರಿಸಿದ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಕ್ರಮ ಅಥವಾ ಜೈಲು ಶಿಕ್ಷೆ ವಿಧಿಸುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ವ್ಯಕ್ತಿಯ ಮನಸ್ಸಾಕ್ಷಿ, ಧಾರ್ಮಿಕ ಸ್ವಾತಂತ್ರ್ಯ ಹಾಗೂ ಸಂವಿಧಾನಾತ್ಮಕ ಹಕ್ಕುಗಳನ್ನು ಗೌರವಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಸೂರ್ಯಕಾಂತ್ ನೇತೃತ್ವದ ಪೀಠ ಸ್ಪಷ್ಟಪಡಿಸಿದೆ.
ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಕ್ಕೆ ರಾಷ್ಟ್ರಗೀತೆಯ ಅವಧಿ ಮತ್ತು ವ್ಯಾಪ್ತಿಯನ್ನು ವಿಸ್ತರಿಸುವ ಅಧಿಕಾರವಿದೆ. ಆದರೆ ಇದರಿಂದ ವ್ಯಕ್ತಿಯ ವೈಯಕ್ತಿಕ ಹಾಗೂ ಸಾಮೂಹಿಕ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಾರದು ಎಂದು ನ್ಯಾಯಾಲಯ ತಿಳಿಸಿದೆ.
ವಂದೇ ಮಾತರಂನ ಒಂದು ಅಥವಾ ಎಲ್ಲಾ ಚರಣಗಳನ್ನು ಹಾಡಲು ಆಕ್ಷೇಪ ವ್ಯಕ್ತಪಡಿಸುವವರನ್ನು ಶಿಕ್ಷೆಗೆ ಗುರಿಪಡಿಸಬಾರದು ಎಂದು ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಸೂರ್ಯಕಾಂತ್ ನೇತೃತ್ವದ ಮೂವರು ಸದಸ್ಯರ ಪೀಠ ಸ್ಪಷ್ಟಪಡಿಸಿದೆ.
ಇಲ್ಲಿ ರಾಷ್ಟ್ರಗೀತೆ ಯಾವುದು ಎಂಬುದರ ಬಗ್ಗೆ ವಿವಾದವಿಲ್ಲ. ರಾಷ್ಟ್ರಗೀತೆ ಹೇಗಿರಬೇಕು, ಅದು ಎರಡು ಚರಣಗಳಾಗಿರಬೇಕೇ ಅಥವಾ ನಾಲ್ಕು ಚರಣಗಳಾಗಿರಬೇಕೇ ಎಂಬುದನ್ನು ಸರ್ಕಾರ ನಿರ್ಧರಿಸಬಹುದು ಎಂದು ಪೀಠ ಹೇಳಿದೆ. ಆದರೆ ಸಂವಿಧಾನದ ಆರ್ಟಿಕಲ್ 25 ಮತ್ತು 26 ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ವ್ಯಕ್ತಿಯ ಮನಸ್ಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳುವಂತೆ ಒತ್ತಾಯಿಸಿ, ಅದನ್ನು ನಿರಾಕರಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ರಾಷ್ಟ್ರಗೀತೆಯ ಒಂದು ಅಥವಾ ಎಲ್ಲಾ ಚರಣಗಳನ್ನು ಹಾಡಬೇಕೇ ಅಥವಾ ಬೇಡವೇ ಎಂಬುದನ್ನು ವ್ಯಕ್ತಿ ತನ್ನ ಮನಸ್ಸಾಕ್ಷಿಯಂತೆ ನಿರ್ಧರಿಸಬಹುದು. ಹಾಡಲು ನಿರಾಕರಿಸಿದ್ದಕ್ಕಾಗಿ ಆ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬಾರದು ಎಂದು ಪೀಠ ತಿಳಿಸಿದೆ.
ಧಾರ್ಮಿಕ ಸ್ವಾತಂತ್ರ್ಯ, ಸಂವಿಧಾನಾತ್ಮಕ ಸಹಿಷ್ಣುತೆ ಹಾಗೂ ಮೌನವಾಗಿ ಆಕ್ಷೇಪ ವ್ಯಕ್ತಪಡಿಸುವ ಹಕ್ಕನ್ನು ಎತ್ತಿಹಿಡಿದಿರುವ 1986ರ ‘ಬಿಜೋಯ್ ಇಮ್ಯಾನುಯೆಲ್ ವಿರುದ್ಧ ಕೇರಳ ಸರ್ಕಾರ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಇಂದಿಗೂ ಅನ್ವಯಿಸುತ್ತದೆ ಎಂದು ಜಸ್ಟಿಸ್ ಬಾಗ್ಚಿ ಹೇಳಿದ್ದಾರೆ.
ಇತಿಹಾಸವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದವರಿಗೆ ರಾಷ್ಟ್ರಗೀತೆಯ ಕುರಿತಾದ ಮಾಹಿತಿ ತಿಳಿದಿರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಸೂರ್ಯಕಾಂತ್ ಹೇಳಿದ್ದಾರೆ. ಸ್ವಾತಂತ್ರ್ಯಕ್ಕೂ ಮುನ್ನವೇ ‘ವಂದೇ ಮಾತರಂ’ ರಾಷ್ಟ್ರಗೀತೆಯಾಗಿತ್ತು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದೇ ನಿರ್ಣಯಕ್ಕೆ ಬರಲು ಆಚರಣೆಗಳು ಹಾಗೂ ಸಂಪ್ರದಾಯಗಳನ್ನೂ ಪರಿಗಣಿಸಬಹುದು ಎಂದು ಜಸ್ಟಿಸ್ ಬಾಗ್ಚಿ ಹೇಳಿದ್ದಾರೆ.
ಜನವರಿಯಲ್ಲಿ ಗೃಹ ಸಚಿವಾಲಯ ಹೊರಡಿಸಿದ್ದ ಆಡಳಿತಾತ್ಮಕ ಆದೇಶ ಹಾಗೂ ಜುಲೈನಲ್ಲಿ ಹೊರಡಿಸಿದ ಮತ್ತೊಂದು ಸುತ್ತೋಲೆಯನ್ನು ಒಳಗೊಂಡಂತೆ, ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ) ಕಾಯ್ದೆ, 2026’ ಅನ್ನು ಪ್ರಶ್ನಿಸಿ ಖ್ಯಾತ ಕರ್ನಾಟಕ ಗಾಯಕ ಹಾಗೂ ಲೇಖಕ ಟಿ.ಎಂ. ಕೃಷ್ಣ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ.

