ನವದೆಹಲಿ: ಚಾಲಕರ ತಪ್ಪಿನಿಂದಾದ ಅಪಘಾತ ಪ್ರಕರಣದಲ್ಲಿ ಕುಟುಂಬಕ್ಕೆ ಪರಿಹಾರ ನೀಡಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಅತಿ ವೇಗ, ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಸವಾರ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ಮೋಟಾರ್ ವಾಹನ ಕಾಯ್ದೆಯಡಿ ವಿಮಾ ಕಂಪನಿ ಪರಿಹಾರ ನೀಡಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅತಿ ವೇಗದಲ್ಲಿ ಕಾರ್ ಚಾಲನೆ ಮಾಡಿದ್ದ ವ್ಯಕ್ತಿ ಮೃತಪಟ್ಟಿದ್ದು, ಅವರ ಪತ್ನಿ, ಪುತ್ರ ಮತ್ತು ಪೋಷಕರು 80 ಲಕ್ಷ ರೂಪಾಯಿ ಪರಿಹಾರ ಕೋರಿದ್ದರು. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆರ್. ಮಹದೇವನ್ ಅವರ ಪೀಠ ಪರಿಹಾರ ನೀಡಲು ನಿರಾಕರಿಸಿದೆ.
ಕರ್ನಾಟಕ ಹೈಕೋರ್ಟ್ ಈ ಕುರಿತಾಗಿ ನೀಡಿದ್ದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿ, ವಿಮಾ ಕಂಪನಿ ಪರಿಹಾರ ನೀಡಬೇಕು ಎಂದು ಮೃತರ ಕಾನೂನುಬದ್ಧ ಉತ್ತರಾಧಿಕಾರಿಗಳು ಮನವಿ ಮಾಡಿದ್ದರು. ಅವರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಹೈಕೋರ್ಟ್ 2024ರ ನವೆಂಬರ್ ನಲ್ಲಿ ನಿರಾಕರಿಸಿತ್ತು. ಇದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು. ಅತಿ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಚಾಲಕರ ತಪ್ಪಿನಿಂದಾದ ಅಪಘಾತ ಪ್ರಕರಣದಲ್ಲಿ ಕುಟುಂಬಕ್ಕೆ ಪರಿಹಾರ ನೀಡಬೇಕಿಲ್ಲ ಎಂದು ಮೇಲ್ಮನವಿ ವಿಚಾರಣೆ ಆಲಿಸಿದ ಸುಪ್ರೀಂ ಕೋರ್ಟ್ ಹೇಳಿದೆ.