ಬೆಂಗಳೂರು: ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯನ್ನು ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಬಿಡುಗಡೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಜೈಲು ಡಿಐಜಿ ಸೋಮಶೇಖರ್ ಅವರನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
2018ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಶಂಕರ್ ಎಂಬ ಕೈದಿಯನ್ನ ಸುಪ್ರೀಂ ಕೋರ್ಟ್‌ನ ನಕಲಿ ಆದೇಶದ ಆಧಾರದ ಮೇಲೆ ಬಿಡುಗಡೆ ಮಾಡಲಾಗಿತ್ತು. ಶಂಕರ್ ಬಿಡುಗಡೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ನಕಲಿ ಆದೇಶವನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಈ ನಕಲಿ ದಾಖಲೆಯನ್ನು ಜೈಲಿನ ಎಸ್‌ಡಿಎ ಆಗಿದ್ದ ಶ್ರೀಕಾಂತ್ ಎಸ್. ಎಂಬಾತ ಸೃಷ್ಟಿಸಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು.
ನಕಲಿ ಆದೇಶದ ಆಧಾರದ ಮೇಲೆ 2018ರ ನವೆಂಬರ್ 13ರಂದು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಶಂಕರ್‌ನನ್ನ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು ಎಂದು ತನಿಖೆಯಲ್ಲಿ ಕೂಡ ದೃಢಪಟ್ಟಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೈದಿ ಶಂಕರ್ ಹಾಗೂ ನಕಲಿ ಆದೇಶ ಸೃಷ್ಟಿಸಿದ ಆರೋಪ ಎದುರಿಸುತ್ತಿರುವ ಶ್ರೀಕಾಂತ್ ಎಸ್. ಇಬ್ಬರನ್ನೂ ಈಗಾಗಲೇ ಬಂಧಿಸಲಾಗಿದೆ. ಇದೀಗ ಈ ಪ್ರಕರಣದಲ್ಲಿ ಅಂದಿನ ಜೈಲು ಚೀಫ್ ಸೂಪರಿಂಟೆಂಡೆಂಟ್ ಆಗಿದ್ದ ಸೋಮಶೇಖರ್ ಅವರ ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದೆ. ಈ ಹಿನ್ನೆಲೆ ಪರಪ್ಪನ ಅಗ್ರಹಾರ ಪೊಲೀಸರು ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪುರುಷರ ಮನಸ್ಸಿನಲ್ಲಿ ಪ್ರಾಣಭಯ ಹುಟ್ಟಿಸಿ: ಪೊಲೀಸರಿಗೆ ಸುಪ್ರೀಂ ಕೋರ್ಟ್ ಹೀಗೆ ಹೇಳಿದ್ದೇಕೆ?
ನವದೆಹಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿ ದೆಹಲಿ ಪೊಲೀಸರಿಗೆ ಖಡಕ್ ಸೂಚನೆ ನೀಡಿದೆ.
ಲೈಂಗಿಕ ಅಪರಾಧಗಳನ್ನು ಮಾಡುವ ಪ್ರವೃತ್ತಿ ಹೊಂದಿರುವ ಪುರುಷರ ಮನಸ್ಸಿನಲ್ಲಿ ಪ್ರಾಣ ಭಯ ಹುಟ್ಟಬೇಕು.’ಇನ್ನು ಮುಂದೆ ಇಂತಹ ಕೃತ್ಯವೆಸಗಿದರೆ ನಾವು ಖಂಡಿತವಾಗಿಯೂ ಬದುಕಲು ಸಾಧ್ಯವಿಲ್ಲ, ಸಾಯುತ್ತೇವೆ’ ಎಂಬ ಭಯ ಅವರಲ್ಲಿ ಕಾಡಬೇಕು. ಅಂತಹ ಸ್ಥಿತಿಯನ್ನು ಪೊಲೀಸರು ಸೃಷ್ಟಿಸಬೇಕು. ಮಹಿಳೆಯರು ರಾತ್ರಿ 10 ಗಂಟೆಯಾದರೂ ಸುರಕ್ಷಿತವಾಗಿ ಹೊರಗೆ ಓಡಾಡುವಂತಾಗಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕೆಲದಿನಗಳ ಹಿಂದೆ ದಕ್ಷಿಣ ದೆಹಲಿಯ ಲೇಡಿ ಶ್ರೀ ರಾಮ್ (LSR) ಮಹಿಳಾ ಕಾಲೇಜಿನಿಂದ ಕೇವಲ 2 ಕಿ.ಮೀ ದೂರದಲ್ಲಿರುವ ಆಸ್ಥಾ ಕುಂಜ್ ಪಾರ್ಕ್‌ನಲ್ಲಿ 17 ವರ್ಷದ ಬಾಲಕಿಯ ಮೇಲೆ ನಕಲಿ ಪೊಲೀಸರ ಸೋಗಿನಲ್ಲಿ ಬಂದು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣವನ್ನು ನ್ಯಾಯಪೀಠ ಗಂಭೀರವಾಗಿ ಪರಿಗಣಿಸಿದೆ. ಆ ಪ್ರದೇಶದಲ್ಲಿ ಈ ಹಿಂದೆಯೇ ಕಿರುಕುಳದ ದೂರುಗಳಿದ್ದರೂ ಪೊಲೀಸರು ಮುನ್ನೆಚ್ಚರಿಕೆ ವಹಿಸದಿರುವುದನ್ನು ತರಾಟೆಗೆ ತೆಗೆದುಕೊಂಡಿತು.
ಇದೇ ವೇಳೆ ಗ್ರೇಟರ್ ನೋಯ್ಡಾದಿಂದ ದೆಹಲಿಗೆ ಸುಮಾರು 47 ಕಿ.ಮೀ ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಅಪ್ರಾಪ್ತೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಸ್ವರೂಪ್ ನಗರದಲ್ಲಿ ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳನ್ನು ನ್ಯಾಯಾಲಯ ಪ್ರಸ್ತಾಪಿಸಿ, ಇದು ವ್ಯವಸ್ಥೆಯ ವೈಫಲ್ಯ ಎಂದು ಕಿಡಿಕಾರಿದೆ.
ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು, “2012ರ ನಿರ್ಭಯಾ ಪ್ರಕರಣದ ಅಪರಾಧಿಗಳು ಸಹ ಅಪರಾಧ ಎಸಗುವ ಮುನ್ನ ಮದ್ಯ ಸೇವಿಸಿ ಸುತ್ತಾಡುತ್ತಿದ್ದರು. ಒಂದು ದಶಕ ಕಳೆದರೂ ಪರಿಸ್ಥಿತಿ ಬದಲಾಗದಿರುವುದು ನೋವಿನ ಸಂಗತಿ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಕಾಲೇಜುಗಳ ಸುತ್ತ ಕಟ್ಟೆಚ್ಚರಮಹಿಳಾ ಕಾಲೇಜುಗಳ ಸುತ್ತ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುವ ಪೋಕರಿಗಳು ಮತ್ತು ಅಲೆಮಾರಿಗಳ ಮೇಲೆ ನಿಗಾ ಇರಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಅಕ್ರಮ ತಿನಿಸುಗಳು/ಢಾಬಾಗಳ ನಿಯಂತ್ರಣಸಮಾಜವಿರೋಧಿ ಶಕ್ತಿಗಳು ಜಮಾಯಿಸಿ ಅಕ್ರಮವಾಗಿ ಮದ್ಯ ಸೇವಿಸುವ ತಿನಿಸುಗಳು ಹಾಗೂ ಅಡ್ಡೆಗಳ ಮೇಲೆ ತಕ್ಷಣವೇ ದಾಳಿ ನಡೆಸಬೇಕು ಎಂದು ಸೂಚಿಸಿದೆ.
ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆ ಮತ್ತು ತುರ್ತು ಸ್ಪಂದನೆಗಾಗಿ ಮೀಸಲಾದ ಸಮಗ್ರ ‘ವಾರ್ ರೂಮ್’ ಕಾರ್ಯನಿರ್ವಹಣೆಯನ್ನು ಚುರುಕುಗೊಳಿಸುವುದು.ಲೈಂಗಿಕ ಅಪರಾಧಿಗಳ ಡೇಟಾಬೇಸ್ರಾಷ್ಟ್ರೀಯ ಲೈಂಗಿಕ ಅಪರಾಧಿಗಳ ಡೇಟಾಬೇಸ್ ಪರಿಶೀಲಿಸಿ, ಹಳೆಯ ಅಪರಾಧಿಗಳು ಮತ್ತು ಶಂಕಿತರ ಚಲನವಲನಗಳ ಮೇಲೆ ನಿರಂತರ ಕಣ್ಗಾವಲು ಇಡಬೇಕು.
ಬೀಟ್ ಗಸ್ತು, ಸಿಸಿಟಿವಿ ಕಣ್ಗಾವಲು ಹಾಗೂ ಕತ್ತಲೆಯಿರುವ ಸಾರ್ವಜನಿಕ ಸ್ಥಳಗಳಲ್ಲಿ ದೀಪಗಳ ವ್ಯವಸ್ಥೆಯನ್ನು ಬಲಪಡಿಸಿ 4 ವಾರಗಳಲ್ಲಿ ವರದಿ ಸಲ್ಲಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸಂವಿಧಾನದ 21ನೇ ವಿಧಿಯಡಿ ಮಹಿಳೆಯರ ಘನತೆ ಮತ್ತು ಜೀವಿಸುವ ಹಕ್ಕನ್ನು ರಕ್ಷಿಸುವುದು ಆಡಳಿತ ಹಾಗೂ ಪೊಲೀಸರ ಮೂಲಭೂತ ಕರ್ತವ್ಯ ಎಂದು ನ್ಯಾಯಾಲಯ ಖಡಕ್ ಆಗಿ ತಿಳಿಸಿದೆ.

