ಬೆಂಗಳೂರು: ಪ್ರತಿ ಕುಟುಂಬಕ್ಕೆ ತಿಂಗಳಿಗೊಂದು ಎಲ್‌ಪಿಜಿ ಸಿಲಿಂಡರ್ ವಿತರಿಸಲಾಗುವುದು ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಅಡುಗೆ ಅನಿಲ ಸಮಸ್ಯೆ ಕುರಿತಾಗಿ ಕಾಂಗ್ರೆಸ್ ಸದಸ್ಯೆ ಹೆಚ್.ಡಿ. ರಂಗನಾಥ್ ಪ್ರಸ್ತಾಪಿಸಿ ನಡೆದ ಚರ್ಚೆಯ ನಂತರ ಸಚಿವರು ಉತ್ತರ ನೀಡಿದ್ದಾರೆ. ಇಸ್ರೇಲ್ –ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧದಿಂದ ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ ನಿರ್ಮಾಣವಾಗಿದೆ. ಆದರೂ ಪ್ರತಿ ತಿಂಗಳು ಒಂದು ಕುಟುಂಬಕ್ಕೆ ಒಂದು ಎಲ್.ಪಿ.ಜಿ. ಸಿಲಿಂಡರ್ ಪೂರೈಸುತ್ತೇವೆ. ದೇಶ ಸಂಕಷ್ಟದಲ್ಲಿರುವಾಗ ಜನ ಸಹಕರಿಸಬೇಕು ಎಂದು ಹೇಳಿದ್ದಾರೆ.
ಅಗತ್ಯವಿರುವ ಎಲ್‌ಪಿಜಿಯಲ್ಲಿ ಶೇಕಡ 70ರಷ್ಟು ವಿದೇಶದಿಂದಲೇ ಬರಬೇಕಿದೆ. ಯುದ್ಧದ ಕಾರಣದಿಂದ ಕಚ್ಚಾ ತೈಲ ಮತ್ತು ಎಲ್.ಪಿ.ಜಿ. ದೇಶಕ್ಕೆ ಬರುತ್ತಿಲ್ಲ. ಉಳಿದಂತೆ ಶೇಕಡ 30ರಷ್ಟು ಎಲ್‌ಪಿಜಿ ಉತ್ಪಾದನೆ ನಮ್ಮ ದೇಶದಲ್ಲಿ ಆಗುತ್ತಿದೆ. ಆ ಎಲ್‌ಪಿಜೆಯಿಂದ ಗೃಹ ಬಳಕೆಗೆ ಸಮಸ್ಯೆಗೆ ಆಗದಂತೆ ಪೂರೈಕೆ ಮಾಡಬಹುದು. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
14 ಕೆಜಿ ಸಿಲಿಂಡರ್ ನಾಲ್ಕೈದು ಮಂದಿ ಸದಸ್ಯರಿರುವ ಕುಟುಂಬಕ್ಕೆ 25 ದಿನಕ್ಕಿಂತಲೂ ಹೆಚ್ಚು ಕಾಲ ಬರುತ್ತದೆ. ಈ ಅಂದಾಜಿನಲ್ಲಿ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಒಂದು ಸಿಲಿಂಡರ್ ಪೂರೈಸುತ್ತೇವೆ. ಮಿತವ್ಯಯಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ತೈಲ ಕಂಪನಿಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗಿದ್ದು, ವಾಣಿಜ್ಯ ಬಳಕೆ ಸಿಲಿಂಡರ್ ಮೇಲೆ ಮಾತ್ರ ನಿಯಂತ್ರಣ ಹೇರಲಾಗಿದೆ. ಹೋಟೆಲ್, ಕಲ್ಯಾಣ ಮಂಟಪ, ಇತರೆಯವರು ಸಹಕಾರ ನೀಡಬೇಕು. ಹಾಸ್ಟೆಲ್, ಆಸ್ಪತ್ರೆಗಳಿಗೂ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಗ್ರಾಹಕರು ಮುಂಗಡವಾಗಿ ಸಿಲಿಂಡರ್ ಕಾಯ್ದಿರಿಸಬಾರದು, ಹೆಚ್ಚುವರಿ ದಾಸ್ತಾನು ಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ. ತುರ್ತು ಸೇವೆ, ಹಾಸ್ಟೆಲ್, ಆಸ್ಪತ್ರೆ, ಶಾಲಾ -ಕಾಲೇಜುಗಳಿಗೆ ವಾಣಿಜ್ಯ ಸಿಲಿಂಡರ್ ಅನ್ನು ಆದ್ಯತೆಯಾಗಿ ಪರಿಗಣಿಸಿ ಪೂರೈಸಲಾಗುವುದು. ಹೋಟೆಲ್ ಮತ್ತು ರೆಸ್ಟೋರೆಂಟ್, ಕಲ್ಯಾಣ ಮಂದಿರ ಮಾಲೀಕರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

