ಉಪಾಹಾರಕ್ಕಾಗಲಿ ಅಥವಾ ರಾತ್ರಿ ಊಟಕ್ಕಾಗಲಿ ಬಿಸಿಯಾದ ಆಲೂ ಪರಾಠ ಸವಿಯಲು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಆದರೆ ಮನೆಮಂದಿಗೆ ರುಚಿಕರವಾದ ಆಲೂ ಪರಾಠ ತಯಾರಿಸುವಾಗ ಎದುರಾಗುವ ಬಹುದೊಡ್ಡ ಸವಾಲೆಂದರೆ ಹಿಟ್ಟನ್ನು ಲಟ್ಟಿಸುವಾಗ ಒಳಗಿರುವ ಆಲೂಗಡ್ಡೆ ಮಸಾಲ ಹೊರಬರುವುದು. ಲಟ್ಟಣಿಗೆಯ ಒತ್ತಡಕ್ಕೆ ಹಿಟ್ಟು ಹರಿದು ಪರಾಠ ನಡುವೆ ತೂತು ಬಿದ್ದರೆ ಅದರ ಸೌಂದರ್ಯ ಮತ್ತು ರುಚಿ ಎರಡೂ ಹಾಳಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೆಲವು ಹಂತಗಳನ್ನು ಅನುಸರಿಸಿ ಸೂಕ್ತ ಹಾದಿಯನ್ನು ಕಂಡುಕೊಳ್ಳಬಹುದು.
ಮೊದಲನೆಯದಾಗಿ, ಪರಾಠಗೆ ಬಳಸುವ ಆಲೂಗಡ್ಡೆ ಮಸಾಲೆಯಲ್ಲಿ ತೇವಾಂಶ ಸಂಪೂರ್ಣವಾಗಿ ಕಡಿಮೆಯಿರಬೇಕು. ಆಲೂಗಡ್ಡೆಯನ್ನು ಬೇಯಿಸಿದ ತಕ್ಷಣ ಮ್ಯಾಶ್ ಮಾಡುವ ಬದಲು, ಅದು ತಣ್ಣಗಾದ ಮೇಲೆ ತುರಿದುಕೊಂಡರೆ ಮಸಾಲೆ ಮುದ್ದೆಯಾಗದೆ ಒಣದಾಗಿರುತ್ತದೆ. ಇದು ಲಟ್ಟಿಸುವಾಗ ಹಿಟ್ಟಿನಿಂದ ಹೊರಬರದಂತೆ ತಡೆಯುತ್ತದೆ. ಇನ್ನು, ಒಳಗಿಡುವ ಮಸಾಲೆಯ ಪ್ರಮಾಣವೂ ಮುಖ್ಯ. ಅತಿಯಾಗಿ ಮಸಾಲೆ ತುಂಬಿದರೆ ಲಟ್ಟಿಸುವಾಗ ಹರಿಯುವುದು ಸಹಜ. ಹಾಗಂತ ತೀರಾ ಕಡಿಮೆ ಮಸಾಲೆ ಬಳಸಿದರೆ ಪರಾಠ ರುಚಿ ನೀರಸವಾಗುತ್ತದೆ. ಆದ್ದರಿಂದ ಹದವಾದ ಪ್ರಮಾಣವನ್ನು ಬಳಸುವುದು ಸೂಕ್ತ.
ಮಸಾಲೆಯನ್ನು ಹಿಟ್ಟಿನೊಳಗೆ ಇಟ್ಟು ಮುಚ್ಚಿದ ನಂತರ ತಕ್ಷಣವೇ ಲಟ್ಟಣಿಗೆಯಿಂದ ತಾಲಬಾರದು. ಮೊದಲು ಕೈ ಬೆರಳುಗಳಿಂದ ಲಟ್ಟೆಯ ಮಧ್ಯಭಾಗವನ್ನು ಮೆಲ್ಲನೆ ಒತ್ತಿ ಮಸಾಲೆ ಸುತ್ತಲೂ ಸಮನಾಗಿ ಹರಡುವಂತೆ ಮಾಡಬೇಕು. ನಂತರ ಮಧ್ಯಭಾಗದಿಂದ ಹೊರಗೆ ತೆಳುವಾಗಿ ಲಟ್ಟಿಸುತ್ತಾ ಹೋದರೆ ಪರಾಠ ಎಲ್ಲೂ ಹರಿಯುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ತಯಾರಿಸಿದ ಆಲೂಗಡ್ಡೆ ಮಸಾಲೆಯನ್ನು ಸ್ವಲ್ಪ ಸಮಯ ಫ್ರಿಡ್ಜ್ನಲ್ಲಿಟ್ಟು ನಂತರ ಬಳಸಿದರೆ ಮಸಾಲೆ ಗಟ್ಟಿಯಾಗಿ, ಲಟ್ಟಿಸಲು ಅತ್ಯಂತ ಸುಲಭವಾಗುತ್ತದೆ. ಆಲೂಗಡ್ಡೆ ತೇವಾಂಶವಿಲ್ಲದೆ ಒಣದಾಗಿರುವುದು ಹಾಗೂ ಹದವಾಗಿ ಲಟ್ಟಿಸುವುದು ಒಂದೊಳ್ಳೆ ಆಲೂ ಪರಾಠ ಮಾಡಲು ಇರುವ ಪ್ರಮುಖ ರಹಸ್ಯ.

