ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಇಂದು ( ಮಾರ್ಚ್ 8 ) ಮತ್ತೊಂದು ಮೆಗಾ ಕಾಳಗಕ್ಕೆ ವೇದಿಕೆಯಾಗಿದೆ. ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಫೈನಲ್ ಪಂದ್ಯ ಇಲ್ಲಿ ನಡೆಯುತ್ತಿದ್ದು, ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಟ್ರೋಫಿಗಾಗಿ ಹೋರಾಟ ನಡೆಸಲಿವೆ.
ಈ ಪಂದ್ಯದಲ್ಲಿ ಗೆದ್ದು ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಮೂರು ಬಾರಿ ಟ್ರೋಫಿ ಗೆದ್ದ ದಾಖಲೆ ಬರೆಯುವತ್ತ ಟೀಮ್ ಇಂಡಿಯಾ ಕಣ್ಣಿಟ್ಟಿದ್ದರೆ, ನ್ಯೂಜಿಲೆಂಡ್ ಮೊದಲ ಬಾರಿಗೆ ಟಿ ಟ್ವೆಂಟಿ ವಿಶ್ವಕಪ್ ಗೆಲ್ಲುವ ತವಕದಲ್ಲಿದೆ.
ಇನ್ನು ಈ ಮೆಗಾ ಪಂದ್ಯದಲ್ಲಿ ಕಣಕ್ಕಿಳಿಯುವ ಭಾರತ ತಂಡದಲ್ಲಿ ಯಾವ ಆಟಗಾರರು ಇರಲಿದ್ದಾರೆ ಹಾಗೂ ಯಾವ ಆಟಗಾರರನ್ನು ಕೈಬಿಡಬೇಕು ಎಂಬುದರ ಕುರಿತು ಚರ್ಚೆಗಳು ಜೋರಾಗಿ ನಡೆಯುತ್ತಿದ್ದು, ಹೆಚ್ಚಾಗಿ ಅಭಿಷೇಕ್ ಶರ್ಮಾ ಕೈಬಿಡುವ ಬಗ್ಗೆ ಕಾಮೆಂಟ್‌ಗಳು ಹರಿದಾಡುತ್ತಿವೆ.
ಈ ಕುರಿತು ಭಾರತದ ಲೆಜೆಂಡರಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮಾತನಾಡಿದ್ದು, ‘ಇದೊಂದು ಕಠಿಣ ನಿರ್ಧಾರ. ಅಭಿಷೇಕ್ ಶರ್ಮಾ ಟಿ ಟ್ವೆಂಟಿಯಲ್ಲಿ ನಂಬರ್ ಒನ್ ಬ್ಯಾಟ್ಸ್‌ಮನ್, ಆದರೆ ಆತ ತನ್ನ ತಪ್ಪುಗಳನ್ನು ತಿದ್ದಿಕೊಂಡಿಲ್ಲ. ಆತನಿಗೆ ಯಾವ ಎಸೆತಗಳನ್ನು ಸರಿಯಾಗಿ ಎದುರಿಸಲು ಆಗುತ್ತಿಲ್ಲವೋ ಅಲ್ಲೇ ಪದೇಪದೇ ಔಟ್ ಆಗುತ್ತಿದ್ದಾನೆ. ಬೌಲರ್‌ಗಳು ಅದನ್ನೇ ಗುರಿಯನ್ನಾಗಿಸಿ ತಪ್ಪು ಮಾಡುವ ಹಾಗೆ ಬೌಲಿಂಗ್ ಮಾಡಿ ಒತ್ತಡ ಹೇರುತ್ತಿದ್ದಾರೆ. ಆತ ತನ್ನ ಬ್ಯಾಟಿಂಗ್ ವೈಖರಿಯನ್ನು ಬದಲಿಸಿಕೊಳ್ಳುತ್ತಿಲ್ಲ ಹಾಗೂ ಅದನ್ನು ಸರಿಪಡಿಸಿಕೊಳ್ಳುತ್ತಲೂ ಇಲ್ಲ’ ಎಂದು ಹೇಳಿಕೆ ನೀಡಿದ್ದಾರೆ.
ಮುಂದುವರಿದು ಮಾತನಾಡಿದ ಸುನಿಲ್ ಗವಾಸ್ಕರ್ ‘ಸಂಜು ಸ್ಯಾಮ್ಸನ್ ಜೊತೆ ಇಶಾನ್ ಕಿಶನ್ ಆರಂಭಿಕನಾಗಿ ಕಣಕ್ಕಿಳಿಯುವುದನ್ನು ನೋಡಲು ನಾನು ಇಚ್ಛಿಸುತ್ತೇನೆ. ಜತೆಗೆ ರಿಂಕು ಸಿಂಗ್ ತಂಡಕ್ಕೆ ಬರಬೇಕು. ರಿಂಕು ಸಿಂಗ್‌ಗೆ ಆ ನಂಬಿಕೆ ಇದೆ. ಆತನ ಕೈ ಮೇಲೆ ‘ದೇವರ ಯೋಜನೆ’ (God’s plan) ಎಂದು ಬರೆದಿರುವ ಟ್ಯಾಟ್ಯೂ ಕಾಣಬಹುದು. ಕೆಲವೊಮ್ಮೆ ಅಂತಹ ಆಟಗಾರರಿಗೆ ಎಲ್ಲವೂ ಸರಿಯಾಗಿ ನಡೆಯುತ್ತದೆ’ ಎಂದು ಅಭಿಷೇಕ್ ಕೈಬಿಟ್ಟು ರಿಂಕು ಕರೆತನ್ನಿ ಎಂದಿದ್ದಾರೆ.

