ಬೇಸಿಗೆಯ ಬಿಸಿಲು ನೆತ್ತಿ ಸುಡುತ್ತಿದೆ. ಬೆಂಗಳೂರು ನಗರದಲ್ಲಿ ನೀರಿಗಾಗಿ ಬೇಡಿಕೆ ಹೆಚ್ಚಾಗುತ್ತಿದೆ. ಬೆಂಗಳೂರು ನಗರದಲ್ಲಿ ಕಾವೇರಿ ನೀರಿನ ಬೇಡಿಕೆ ಹೆಚ್ಚುತ್ತಿದ್ದು, ಬೆಂಗಳೂರು ಜಲಮಂಡಳಿ ಟ್ಯಾಂಕರ್‌ಗಳ ಸಂಖ್ಯೆಯನ್ನು 160ಕ್ಕೆ ಏರಿಕೆ ಮಾಡಿದೆ. ಜನರಿಗೆ ಅಗತ್ಯ ಸಮಯದಲ್ಲಿ ನೀರು ಪೂರೈಕೆಗೆ ಆದ್ಯತೆ ನೀಡಿದೆ.
ಬೆಂಗಳೂರು ನಗರದಲ್ಲಿ ಬೇಸಿಗೆಯ ತಾಪಮಾನ ಏರುತ್ತಿರುವ ಹಿನ್ನೆಲೆಯಲ್ಲಿ, ನಗರದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಎಚ್ಚರವಹಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಅಗತ್ಯ ಕ್ರಮ ಕೈಗೊಂಡಿದೆ ಎಂದು ಹೇಳಿದೆ.
ತನ್ನ ಜನಪ್ರಿಯ ‘ಸಂಚಾರಿ ಕಾವೇರಿ’ ಟ್ಯಾಂಕರ್ ಸೇವೆಯನ್ನು ಮತ್ತಷ್ಟು ವಿಸ್ತರಿಸಿದೆ ಎಂದು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಿದೆ. ಬೇಸಿಗೆಯ ಹೆಚ್ಚುವರಿ ಬೇಡಿಕೆಯನ್ನು ಸುಗಮವಾಗಿ ಪೂರೈಸಲು ಜಲಮಂಡಳಿಯು ಟ್ಯಾಂಕರ್‌ಗಳ ಸಂಖ್ಯೆಯನ್ನು 160ಕ್ಕೆ ಏರಿಕೆ ಮಾಡಿದೆ.
ಅಧಿಕಾರಿಗಳ ಪ್ರಕಾರ, ನಗರದಲ್ಲಿ ಸಾಕಷ್ಟು ನೀರಿನ ಲಭ್ಯತೆಯಿದ್ದರೂ, ಕಾವೇರಿ ಸಂಪರ್ಕವಿಲ್ಲದ ಕೆಲವು ಬಡಾವಣೆಗಳಲ್ಲಿ ಬೇಸಿಗೆಯಲ್ಲಿ ನೀರಿನ ಬೇಡಿಕೆ ಹೆಚ್ಚಾಗುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ಈ ಟ್ಯಾಂಕರ್ ಸೇವೆಯನ್ನು ಮತ್ತಷ್ಟು ಹೆಚ್ಚಿಸಲಾಗುತ್ತಿದೆ.
ಸಂಚಾರಿ ಕಾವೇರಿ ಸೇವೆಯ ಪ್ರಮುಖ ಅಂಶಗಳು
- ಸಂಪೂರ್ಣ ಪಾರದರ್ಶಕತೆಗಾಗಿ ಜಿಪಿಎಸ್ (GPS) ಟ್ರ್ಯಾಕಿಂಗ್ ಹಾಗೂ ಒಟಿಪಿ (OTP) ಆಧಾರಿತ ನೀರು ವಿತರಣೆ.
- ನಿಗದಿತ ದರದಲ್ಲಿಯೇ ಕಡ್ಡಾಯವಾಗಿ ಆನ್‌ಲೈನ್ ಮೂಲಕ ಪಾವತಿಸುವ ವ್ಯವಸ್ಥೆ.
- ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುವಂತಿಲ್ಲ; ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ.
ಬೇಸಿಗೆಯ ಅವಧಿಯಲ್ಲೂ ನಾಗರಿಕರಿಗೆ ದಕ್ಷ ಹಾಗೂ ಪಾರದರ್ಶಕ ಸೇವೆ ಒದಗಿಸಲು ಜಲಮಂಡಳಿ ಸಂಪೂರ್ಣವಾಗಿ ಸಜ್ಜಾಗಿದೆ ಎಂದು ಜಲಮಂಡಳಿ ಹೇಳಿದೆ.
ಮೊದಲು ಜಲಮಂಡಳಿ 150 ಟ್ಯಾಂಕರ್‌ಗಳ ಗುರಿ ಹೊಂದಿತ್ತು. ಆದರೆ ಅಷ್ಟಾಗಿ ಬೇಡಿಕೆ ಇಲ್ಲದ ಕಾರಣಕ್ಕೆ ಜಲಮಂಡಳಿಯ 50, ಖಾಸಗಿ 49 ಸೇರಿ 99 ಟ್ಯಾಂಕರ್ ಸೇವೆ ನೀಡುತ್ತಿತ್ತು. ಈಗ ಅದಕ್ಕೆ 60 ಟ್ಯಾಂಕರ್ ಸೇರಿಸಲಾಗುತ್ತಿದೆ.
ಅಧಿಕಾರಿಗಳ ಮಾಹಿತಿಯಂತೆ ಫೆಬ್ರವರಿ 3ನೇ ವಾರದ ವರೆಗೂ ನಿತ್ಯ 100 ಟ್ಯಾಂಕರ್ ಟ್ರಿಪ್ ನೀರು ಸರಬರಾಜು ಬೇಡಿಕೆ ಇತ್ತು. ಆದರೆ ತಿಂಗಳ ಅಂತ್ಯಕ್ಕೆ ಅದು 150 ಟ್ರಿಪ್‌ಗೆ ಏರಿಕೆಯಾಗಿದೆ.

