ಹಾಸನ: ಕಾಡಾನೆ ಸೆರೆ ಕಾರ್ಯಾಚರಣೆಗೆ ದುಬಾರೆ ಶಿಬಿರದಿಂದ ಬಂದಿದ್ದ ಸುಗ್ರೀವ ಆನೆ ಆಹಾರ ನೀಡುತ್ತಿದ್ದ ಕಾವಾಡಿಗನ ಮೇಲೆ ದಾಳಿ ನಡೆಸಿದೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದ ತಾತ್ಕಾಲಿಕ ಸಾಕಾನೆ ಶಿಬಿರದಲ್ಲಿ ಘಟನೆ ನಡೆದಿದೆ.
ಕಾವಾಡಿಗ ರಾಜು ಅವರ ಮೇಲೆ ದಾಳಿ ಮಾಡಿದ ಸುಗ್ರೀವ ಆನೆ ದಂತದಿಂದ ತಿವಿದು ಗಂಭೀರವಾಗಿ ಗಾಯಗೊಳಿಸಿದೆ. ರಾಜು ಹಾಸನದ ಹಿಮ್ಸ್ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸಿಎಫ್ ಸೌರವ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಬುಧವಾರ ಆರು ಸಾಕಾನೆಗಳು ಕಾಡಾನೆ ಸೆರೆ ಕಾರ್ಯಾಚರಣೆಗೆ ಆಗಮಿಸಿದ್ದವು. ಸುಗ್ರೀವ ಆನೆ ಮುಂದಾಳತ್ವದಲ್ಲಿ ಕಾರ್ಯಾಚರಣೆ ನಡೆಸಿ ಒಂಟಿ ಕೋರೆಯ ಕಾಡಾನೆ ಸೆರೆ ಹಿಡಿಯಲಾಗಿತ್ತು. ಆದರೆ ಅದು ತಪ್ಪಿಸಿಕೊಂಡು ಹೋಗಿದ್ದು ಮತ್ತೆ ಸೆರೆಗೆ ಕಾರ್ಯಾಚರಣೆ ನಡೆಸುವ ವೇಳೆ ಸುಗ್ರೀವ ಆನೆ ರಾಜು ಮೇಲೆ ದಾಳಿ ಮಾಡಿದೆ.

