ನವದೆಹಲಿ: ತಕ್ಷಣದಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಸಕ್ಕರೆ ರಫ್ತಿಗೆ ಸಂಪೂರ್ಣ ನಿಷೇಧ ಹೇರಿ ಆದೇಶ ಹೊರಡಿಸಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಬರುವ ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (DGFT) ಈ ಆದೇಶ ಹೊರದಿಸಿದೆ. ಸಕ್ಕರೆ ರಫ್ತು ನೀತಿಯನ್ನು ಈ ಹಿಂದೆ ಇದ್ದ ‘ನಿರ್ಬಂಧಿತ’ ವರ್ಗದಿಂದ ‘ನಿಷೇಧಿತ’ ವರ್ಗಕ್ಕೆ ಬದಲಾಯಿಸಲಾಗಿದೆ. ಈ ವರ್ಷದ ಸೆಪ್ಟೆಂಬರ್ 30 ರವರೆಗೆ ಸಕ್ಕರೆ ರಫ್ತನ್ನು ನಿಷೇಧಿಸಲಾಗಿದೆ.
ಈ ನಿಷೇಧವು ಕಚ್ಚಾ ಸಕ್ಕರೆ, ಬಿಳಿ ಸಕ್ಕರೆ, ಮತ್ತು ಸಂಸ್ಕರಿಸಿದ ಸಕ್ಕರೆ ಸೇರಿದಂತೆ ಎಲ್ಲಾ ರೀತಿಯ ಸಕ್ಕರೆ ರಫ್ತುಗಳಿಗೂ ಅನ್ವಯಿಸುತ್ತದೆ. ಕಠಿಣ ನಿಷೇಧದ ನಡುವೆಯೂ ಕೆಲವು ಪ್ರಮುಖ ವಿನಾಯಿತಿಗಳನ್ನು ನೀಡಲಾಗಿದೆ. ನಿಗದಿತ ಕೋಟಾದಡಿ ಯುರೋಪಿಯನ್ ಯೂನಿಯನ್ (EU) ಮತ್ತು ಅಮೆರಿಕ (USA) ದೇಶಗಳಿಗೆ ಮಾಡುವ ಸಕ್ಕರೆ ರಫ್ತುಗಳಿಗೆ ಈ ನಿಷೇಧ ಅನ್ವಯಿಸುವುದಿಲ್ಲ. ಭಾರತ ಸರ್ಕಾರದಿಂದ ವಿಶೇಷವಾಗಿ ಅನುಮೋದಿಸಲ್ಪಟ್ಟ ರಫ್ತು ಸರಕುಗಳು ಮತ್ತು ಈಗಾಗಲೇ ಸಾಗಣೆಯಲ್ಲಿರುವ ಆರ್ಡರ್‌ಗಳಿಗೆ ವಿನಾಯಿತಿ ಇರಲಿದೆ.
ಕಾರಣವೇನು?
ಹವಾಮಾನ ವೈಪರೀತ್ಯ ಹಾಗೂ ಎಲ್ ನಿನೋ ಪ್ರಭಾವದಿಂದಾಗಿ ಕಬ್ಬಿನ ಉತ್ಪಾದನೆ ಕುಂಠಿತಗೊಳ್ಳುವ ಆತಂಕ ಎದುರಾಗಿದೆ. ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘವು ಪ್ರಸಕ್ತ ಹಂಗಾಮಿನ ಒಟ್ಟು ಸಕ್ಕರೆ ಉತ್ಪಾದನಾ ಅಂದಾಜನ್ನು 32 ಮಿಲಿಯನ್ ಟನ್‌ಗಳಿಗೆ ಇಳಿಸಿದೆ. ಉತ್ಪಾದನೆ ಕುಂಠಿತಗೊಂಡಿರುವ ಕಾರಣ ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಚಿಲ್ಲರೆ ದರಗಳು ಹೆಚ್ಚಾಗದಂತೆ ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದರ ಜೊತೆ ಹಬ್ಬದ ಸೀಸನ್‌ಗಳಲ್ಲಿ ದೇಶದೊಳಗೆ ಸಕ್ಕರೆ ಕೊರತೆಯಾಗದಂತೆ ಬಫರ್ ಸ್ಟಾಕ್ ಕಾಯ್ದುಕೊಳ್ಳಲು ಮತ್ತು ಪಶ್ಚಿಮ ಏಷ್ಯಾ ಪ್ರಾಂತ್ಯದಲ್ಲಿ ನಡೆಯುತ್ತಿರುವ ಯುದ್ಧದ ಬಿಕ್ಕಟ್ಟಿನಿಂದಾಗಿ ಎದುರಾಗಬಹುದಾದ ಆಹಾರ ಹಣದುಬ್ಬರದ ಅಪಾಯದಿಂದ ದೇಶದ ಜನರನ್ನು ರಕ್ಷಿಸಲು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಭಾರತ ಸಕ್ಕರೆ ರಫ್ತಿಗೆ ನಿಷೇಧ ಹೇರುತ್ತಿದ್ದಂತೆ ನ್ಯೂಯಾರ್ಕ್ ಕಚ್ಚಾ ಸಕ್ಕರೆ ಮಾರುಕಟ್ಟೆ ಶೇ. 2 ಕ್ಕಿಂತ ಹೆಚ್ಚು ಮತ್ತು ಲಂಡನ್ ಬಿಳಿ ಸಕ್ಕರೆ ಮಾರುಕಟ್ಟೆ ಶೇ.3 ರಷ್ಟು ದುಬಾರಿಯಾಗಿದೆ. ಸಕ್ಕರೆ ಬೆಲೆ ಏರಿಕೆಯಿಂದಾಗಿ ಜಾಗತಿಕವಾಗಿ ಸಿಹಿತಿಂಡಿ, ಸಾಫ್ಟ್ ಡ್ರಿಂಕ್ಸ್ ಮತ್ತು ಬೇಕರಿ ಉತ್ಪನ್ನಗಳ ಬೆಲೆ ಹೆಚ್ಚಾಗಲಿದೆ.

