ಬೆಂಗಳೂರು: ವಸತಿ ಶಾಲೆಯಲ್ಲಿ ೬ನೇ ತರಗತಿ ವಿದ್ಯಾರ್ಥಿಯೋರ್ವ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸ್ಟ್ರಲಿಂಗ್ ವಸತಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಗುರುಕಿರಣ್ (12) ಮೃತ ಬಾಲಕ. ಬೆಳಿಗ್ಗೆ ಜಾಗಿಂಗ್ ಮಾಡುತ್ತಿದ್ದಾಗ ಗುರುಕಿರಣ್ ಕುಸಿದು ಬಿದ್ದಿದ್ದಾನೆ ಎಂದು ವಸತಿ ಶಾಲೆಯವರು ಪೋಷಕರಿಗೆ ಕರೆ ಮಾಡಿ ಬರುವಂತೆ ಹೇಳಿದ್ದರಂತೆ. ಆಸ್ಪತ್ರೆಗೆ ಕರೆದೊಯ್ಯುತ್ತಿರುವುದಾಗಿ ತಿಳಿಸಿದ್ದರಂತೆ.
ಪೋಷಕರು ಆಸ್ಪತ್ರೆ ಬಳಿ ಬರುವಷ್ಟರಲ್ಲಿ ಬಾಲಕ ಸಾವನ್ನಪ್ಪಿದ್ದ. ಶಿಕ್ಷಕರು ಶಾಲೆಯಲ್ಲಿ ಹಿಂಸೆ ನೀಡಿದ್ದರಿಂದಲೇ ಒತ್ತಡದಿಂದ ಮಗ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಶಾಲೆ ಬಳಿ ಜಮಾವಣೆಗೊಂಡಿರುವ ಪೋಷಕರು, ಸಂಬಂಧಿಕರು ಗುರುಕಿರಣ್ ಸಾವಿಗೆ ನ್ಯಾಯ ಕೊಡಿಸುವಂತೆ ಪ್ರತಿಭಟನೆ ನಡೆಸಿದ್ದಾರೆ. ಪಿಟಿ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

