ಲಖನೌ: ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ಶಿಕ್ಷಕ-ಶಿಕ್ಷಕಿಯರೇ ಮಕ್ಕಳನ್ನು ಥಳಿಸುವ, ಹಲ್ಲೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇಲ್ಲೊಂದು ಘಟನೆಯಲ್ಲಿ ಶಿಕ್ಷಕನೊಬ್ಬ ಎರಡನೇ ತರಗತಿ ವಿದ್ಯಾರ್ಥಿಗೆ 150 ಬಾರಿ ಬಾಸುಂಡೆ ಬರುವಂತೆ ಹೊಡೆದು ರಾಕ್ಷಸನಂತೆ ವರ್ತಿಸಿದ್ದಾನೆ.
ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಕರ್ನೈಲಗಂಜ್ ಪ್ರದೇಶದ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿ ಹೋಂ ವರ್ಕ್ ಪೂರ್ಣಗೊಳಿಸಿಲ್ಲ ಎಂಬ ಕಾರಣಕ್ಕೆ ಮನಬಂದಂತೆ ಶಿಕ್ಷಕ ಥಳಿಸಿದ್ದಾನೆ. ಶಿಕ್ಷಕ ಹೊಡೆದ ಏಟಿಗೆ ವಿದ್ಯಾರ್ಥಿಯ ಎರಡೂ ಕಾಲಿಗೂ ಬಾಸುಂಡೆ ಬಂದಿದ್ದು, ಊದಿಕೊಂಡಿದೆ. ಶಿಕ್ಷಕ 150 ಬಾರಿ ಹೊಡೆದಿದ್ದಾನಂತೆ. ವಿದ್ಯಾರ್ಥಿ ಅಸ್ವಸ್ಥನಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಶಾಲೆಯಿಂದ ಮನೆಗೆ ಬಂದ ಮಗು ತೀವ್ರವಾಗಿ ಅಸ್ವಸ್ಥವಾಗಿತ್ತು. ನಡೆಯಲು ಕಷ್ಟಪಡುತ್ತಿತ್ತು. ಪೋಷಕರು ವಿಚಾರಿಸಿದಾಗ ಇಂಗ್ಲೀಷ್ ಶಿಕ್ಷಕ ಪ್ರಖರ್ ಸಿಂಗ್ ಎಂಬಾತ ಮನಬಂದಂತೆ ಹೊಡೆದಿದ್ದಾಗಿ ಮಗು ಬಾಯ್ಬಿಟ್ಟಿದೆ. ಕಾಲುಗಳಲ್ಲಿನ ಗಾಯ, ಬಾಸುಂಡೆ ಕಂಡು ಪೋಷಕರು ಕಂಗಾಲಾಗಿದ್ದಾರೆ.
ಪೋಷಕರು ಶಾಲೆಯ ಆಡಳಿತ ಮಂಡಳಿಗೆ ದೂರು ನೀಡಿದ ಬಳಿಕ ಪೊಲೀಸ್ ಠಾಣೆಯಲ್ಲಿ ಶಿಕ್ಷಕನ ವಿರುದ್ಧ ದೂರು ದಾಖಲಿಸಿದ್ದಾರೆ. ಶಿಕ್ಷಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ 115 (2), 351(3), 352ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಇಂಗ್ಲೀಷ್ ಶಿಕ್ಷಕನನ್ನು ಸೇವೆಯಿಂದ ವಜಾಗೊಳಿಸಿ ಶಾಲೆಯ ಪ್ರಾಂಶುಪಾಲರು ಆದೇಶ ಹೊರಡಿಸಿದ್ದಾರೆ.

