ರಾಯಚೂರು: ಜಿಲ್ಲೆಯ ಹೊರವಲಯದ ಮಲಿಯಾಬಾರ್ ಪ್ರದೇಶದಲ್ಲಿ ಮನಕಲಕುವ ಘಟನೆ ನಡೆದಿದೆ. ಮನೆ ಸಮೀಪ ಆಟವಾಡುತ್ತಿದ್ದ 4 ವರ್ಷದ ಗೋಪಾಲ್ ಎಂಬ ಬಾಲಕನ ಮೇಲೆ ಬೀದಿನಾಯಿಗಳ ಗುಂಪು ಏಕಾಏಕಿ ದಾಳಿ ನಡೆಸಿದ್ದು, ತಲೆಗೆ ಗಂಭೀರ ಗಾಯಗಳಾಗಿವೆ.
ನಾಯಿಗಳ ದಾಳಿಯಿಂದ ಬಾಲಕನ ತಲೆಯ ಚರ್ಮವೇ ಕಿತ್ತು ಹೋಗಿದ್ದು, ರಕ್ತದ ಮಡುವಿನಲ್ಲಿ ನರಳುತ್ತಿದ್ದ ಮಗುವನ್ನು ಸ್ಥಳೀಯರು ತಕ್ಷಣ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಬಾಲಕನಿಗೆ ತುರ್ತು ಚಿಕಿತ್ಸೆ ನೀಡುತ್ತಿದ್ದು, ತಲೆಗೆ ತೀವ್ರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಬಾಲಕ ಮನೆ ಬಳಿ ಆಟವಾಡುತ್ತಿದ್ದಾಗ ಬೀದಿನಾಯಿಗಳು ಏಕಾಏಕಿ ದಾಳಿ ನಡೆಸಿವೆ. ಮಗುವಿನ ಕಿರುಚಾಟ ಕೇಳಿ ಸ್ಥಳೀಯರು ಓಡಿ ಬಂದು ನಾಯಿಗಳನ್ನು ಓಡಿಸಿ ಬಾಲಕನನ್ನು ರಕ್ಷಿಸಿದ್ದಾರೆ.ಈ ಘಟನೆ ಬಳಿಕ ಪ್ರದೇಶದ ನಿವಾಸಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದು, ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಸ್ಥಳೀಯ ಆಡಳಿತಕ್ಕೆ ಒತ್ತಾಯಿಸಿದ್ದಾರೆ.
ತುರ್ತು ಕ್ರಮಗಳು:
- ಮೊದಲನೆಯದಾಗಿ ನಾಯಿಯನ್ನು ಓಡಿಸಿ: ಕೂಡಲೇ ಮಗುವನ್ನು ನಾಯಿಯ ಹಿಡಿತದಿಂದ ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಿರಿ.
- ಗಾಯವನ್ನು ತೊಳೆಯಿರಿ: ನಾಯಿ ಕಚ್ಚಿದ ಅಥವಾ ಪರಚಿದ ಜಾಗವನ್ನು ಸೋಪು ಮತ್ತು ನೀರಿನಿಂದ ಕನಿಷ್ಠ ೧೫ ನಿಮಿಷಗಳ ಕಾಲ ಸ್ವಚ್ಛವಾಗಿ ತೊಳೆಯಿರಿ. ಇದು ಸೋಂಕಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
- ಆಸ್ಪತ್ರೆಗೆ ಕರೆದೊಯ್ಯಿರಿ: ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ತಕ್ಷಣವೇ ಸಮೀಪದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ದಾಖಲಿಸಿ.
- ಲಸಿಕೆ ಹಾಕಿಸಿ: ವೈದ್ಯರ ಸಲಹೆಯಂತೆ ಮಗುವಿಗೆ ರೇಬಿಸ್ (Anti-Rabies) ಲಸಿಕೆ ಮತ್ತು ಗಾಯದ ತೀವ್ರತೆಗೆ ಅನುಗುಣವಾಗಿ ಇಮ್ಯುನೊಗ್ಲಾಬ್ಯುಲಿನ್ ಚುಚ್ಚುಮದ್ದನ್ನು ತಪ್ಪದೇ ಕೊಡಿಸಿ.
ಮುನ್ನೆಚ್ಚರಿಕೆಗಳು:
- ಮಗುವು ಆಟವಾಡುತ್ತಿರುವಾಗ ಅಥವಾ ನಡೆದುಕೊಂಡು ಹೋಗುವಾಗ ಬೀದಿ ನಾಯಿಗಳು ಇರುವ ಜಾಗದಲ್ಲಿ ಏಕಾಂಗಿಯಾಗಿ ಬಿಡಬೇಡಿ.
- ಆಹಾರದ ಪೊಟ್ಟಣಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಹೋಗುವಾಗ ನಾಯಿಗಳು ಆಕರ್ಷಿತಗೊಳ್ಳುವ ಸಾಧ್ಯತೆ ಹೆಚ್ಚು, ಎಚ್ಚರಿಕೆ ವಹಿಸಿ.
- ಸ್ಥಳೀಯವಾಗಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದರೆ, ಈ ಬಗ್ಗೆ ನಗರ ಪಾಲಿಕೆ ಅಥವಾ ಸ್ಥಳೀಯ ಆಡಳಿತಕ್ಕೆ ದೂರು ನೀಡಿ.

