ಪ್ರೀತಿಯಲ್ಲಿ ಬಿದ್ದಾಗ ಮನುಷ್ಯನಿಗೆ ಹುಚ್ಚು ಹಿಡಿಯುತ್ತದೆ ಮತ್ತು ಕಣ್ಣು ಕಾಣದಂತಾಗುತ್ತದೆ ಎಂದು ಹೇಳುತ್ತಾರೆ. ಅವರಿಗೆ ತಮಗೆ ಇಷ್ಟವಾದ ವ್ಯಕ್ತಿ ಹೊರತುಪಡಿಸಿ ಬೇರೆ ಯಾರೂ ಕಾಣಿಸುವುದಿಲ್ಲ. ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನಲ್ಲಿ ನಡೆದ ಇಂತಹದ್ದೇ ಒಂದು ಘಟನೆ ಇದೀಗ ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ಗೆ ಲೈಕ್ ಮಾಡುತ್ತಾ ಆರಂಭವಾದ ಮಾತುಕತೆ, ಕೊನೆಗೆ ಒಂದು ವಿಚಿತ್ರವಾದ ಪ್ರೇಮಕಥೆಯಾಗಿ ಬದಲಾಯಿತು. 40 ವರ್ಷದ ಮಹಿಳೆ, ನಾಲ್ವರು ಮಕ್ಕಳ ತಾಯಿಯಾಗಿದ್ದರೂ, 14 ವರ್ಷದ ಬಾಲಕನ ಮೇಲೆ ಮನಸೋತಿದ್ದಾಳೆ. ಅವನನ್ನು ಪಡೆಯಲು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಆಶ್ಚರ್ಯಕರವಾದ ವಿಷಯವೆಂದರೆ, ಆಕೆ ತನ್ನ ಪ್ರೇಮಿ ಎಂದು ಹೇಳಿಕೊಳ್ಳುತ್ತಿರುವ ಬಾಲಕ, ಆಕೆಯ ದೊಡ್ಡ ಮಗನಿಗಿಂತ 5 ವರ್ಷ ಚಿಕ್ಕವನು. ಸದ್ಯ ಈ ಸುದ್ದಿ ಸ್ಥಳೀಯವಾಗಿ ಚರ್ಚೆಯ ವಿಷಯವಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಆರಂಭವಾದ ಪ್ರೇಮ: ಪೊಲೀಸರ ಮಾಹಿತಿ ಪ್ರಕಾರ, ಈ ಮಹಿಳೆ ಗೋರಖ್‌ಪುರದವಳು. ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಆ ಬಾಲಕನ ಪರಿಚಯವಾಯಿತು. ಇಬ್ಬರೂ ಒಬ್ಬರ ರೀಲ್ಸ್‌ಗೆ ಇನ್ನೊಬ್ಬರು ಲೈಕ್ ಮಾಡಿಕೊಳ್ಳುತ್ತಾ, ನಂತರ ಮಾತನಾಡಲು ಪ್ರಾರಂಭಿಸಿದರು. ಈ ಮಾತುಕತೆ ಹೆಚ್ಚಾಗಿ, ಇಬ್ಬರೂ ಭಾವನಾತ್ಮಕವಾಗಿ ಹತ್ತಿರವಾದರು. ತಮಗೆ ಮದುವೆಯಾಗಿದೆ ಎಂದು ಆಕೆ ವಾದಿಸಿದರೂ, ಅದಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆಗಳನ್ನು ತೋರಿಸಲಿಲ್ಲ.ಆ ಮಹಿಳೆಗೆ 40 ವರ್ಷ ವಯಸ್ಸು ಮತ್ತು ಈಗಾಗಲೇ ಮದುವೆಯಾಗಿ ನಾಲ್ವರು ಮಕ್ಕಳಿದ್ದಾರೆ ಎಂಬುದು ತಿಳಿದು ಎಲ್ಲರೂ ಶಾಕ್ ಆಗಿದ್ದಾರೆ. ಆಕೆಯ ದೊಡ್ಡ ಮಗ, ಆ ಬಾಲಕನಿಗಿಂತ 5 ವರ್ಷ ದೊಡ್ಡವನಾಗಿರುವುದು ವಿಶೇಷ. ಈ ವಿಷಯ ಹೊರಬರುತ್ತಿದ್ದಂತೆಯೇ ಸ್ಥಳೀಯರು ದಂಗಾಗಿದ್ದಾರೆ.
ಚೆನ್ನೈನಲ್ಲಿ ಬಾಲಕ: ಆ ಬಾಲಕ ತನ್ನ ತಂದೆಯೊಂದಿಗೆ ಚೆನ್ನೈನಲ್ಲಿ ವಾಸಿಸುತ್ತಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಬೆಳೆದ ನಂತರ, ಬಾಲಕ ಆಕೆಯಿಂದ ದೂರವಿರಲು ಪ್ರಾರಂಭಿಸಿದನು. ಇದರಿಂದ ಆಕ್ರೋಶಗೊಂಡ ಮಹಿಳೆ, ಬಾಲಕ ತನ್ನನ್ನು ಮದುವೆಯಾಗಿ ಬಿಟ್ಟುಹೋಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಬಾಲಕ ಅಪ್ರಾಪ್ತನಾಗಿದ್ದರಿಂದ, ಪೊಲೀಸರು ಬಹಳ ಎಚ್ಚರಿಕೆಯಿಂದ ವ್ಯವಹರಿಸಿ, ಎರಡೂ ಕಡೆಯವರನ್ನು ಕರೆಸಿ ಕೌನ್ಸೆಲಿಂಗ್ ನೀಡಿದರು.
ಬಗೆಹರಿದ ವಿವಾದ: ಮೊದಲು ನೌತನ್ವಾ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದರೂ, ಪೊಲೀಸರ ಕೌನ್ಸೆಲಿಂಗ್ ನಂತರ ಆಕೆ ಯಾವುದೇ ಕಾನೂನು ಕ್ರಮ ಬೇಡ ಎಂದು ಹೇಳಿದ್ದಾಳೆ. ಭವಿಷ್ಯದಲ್ಲಿ ಒಬ್ಬರನ್ನೊಬ್ಬರು ಮಾತನಾಡಿಸಬಾರದು ಎಂದು ಎರಡೂ ಕಡೆಯವರು ಒಪ್ಪಿಕೊಂಡ ನಂತರ ವಿವಾದ ಬಗೆಹರಿಯಿತು. ಸದ್ಯ ಈ ಘಟನೆ ಸ್ಥಳೀಯವಾಗಿ ಸದ್ದು ಮಾಡುತ್ತಿದೆ.

