ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ನಡೆಸುವ ಪ್ರಕ್ರಿಯೆಗೆ ವೇಗ ಸಿಕ್ಕಿದ್ದು, ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಚುನಾವಣಾ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಮಹತ್ವದ ಸುತ್ತೋಲೆ ಹೊರಡಿಸಿದೆ. 2027ರ ಮಾರ್ಚ್ ಅಂತ್ಯದೊಳಗೆ ಅವಧಿ ಮುಕ್ತಾಯಗೊಳ್ಳುವ ಎಲ್ಲಾ ಗ್ರಾಮ ಪಂಚಾಯಿತಿಗಳು ಹಾಗೂ ಪುನರ್‌ರಚಿತ 42 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಸುತ್ತೋಲೆಯ ಪ್ರಕಾರ, ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ‘ಗ್ರೂಪ್-ಬಿ’ ವೃಂದದ ಅಧಿಕಾರಿಯನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಬೇಕು. ಅವರಿಗೆ ನೆರವಾಗಲು ಶಿರಸ್ತೇದಾರ್, ಸೂಪರಿಂಟೆಂಡೆಂಟ್ ಅಥವಾ ವ್ಯವಸ್ಥಾಪಕ ಹುದ್ದೆಯ ಅಧಿಕಾರಿಯನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನಿಯೋಜಿಸಬೇಕು. ನೇಮಕವಾಗುವ ಅಧಿಕಾರಿಗಳ ಸ್ವಂತ ತವರು ಕ್ಷೇತ್ರಕ್ಕೆ ಅವರನ್ನು ನಿಯೋಜಿಸಬಾರದು ಎಂಬ ಕಟ್ಟುನಿಟ್ಟಿನ ಸೂಚನೆಯನ್ನೂ ಆಯೋಗ ನೀಡಿದೆ.
ಸದಸ್ಯ ಸ್ಥಾನಗಳ ಆಧಾರದ ಮೇಲೆ ಅಧಿಕಾರಿಗಳ ನೇಮಕ ಹೀಗಿದೆ:
- 25 ಸದಸ್ಯ ಸ್ಥಾನಗಳವರೆಗೆ: 1 ಚುನಾವಣಾಧಿಕಾರಿ + 1 ಸಹಾಯಕ ಚುನಾವಣಾಧಿಕಾರಿ.
- 25 ರಿಂದ 35 ಸದಸ್ಯ ಸ್ಥಾನಗಳವರೆಗೆ: 1 ಚುನಾವಣಾಧಿಕಾರಿ + 2 ಸಹಾಯಕ ಚುನಾವಣಾಧಿಕಾರಿಗಳು.
- 35ಕ್ಕಿಂತ ಹೆಚ್ಚು ಸದಸ್ಯ ಸ್ಥಾನಗಳಿದ್ದರೆ: 2 ಚುನಾವಣಾಧಿಕಾರಿಗಳು + 2 ಸಹಾಯಕ ಚುನಾವಣಾಧಿಕಾರಿಗಳು.
ರಾಜ್ಯ ಚುನಾವಣಾ ಆಯೋಗವು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದು, ಚುನಾವಣಾ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಅಗತ್ಯ ಸಿಬ್ಬಂದಿ ನಿಯೋಜನೆಗೆ ಆದ್ಯತೆ ನೀಡಲಾಗಿದೆ.
ಇದರ ಜೊತೆಗೆ, 2027ರ ಏಪ್ರಿಲ್ ನಂತರ ಅವಧಿ ಮುಕ್ತಾಯಗೊಳ್ಳಲಿರುವ 56 ಗ್ರಾಮ ಪಂಚಾಯಿತಿಗಳ ಪಟ್ಟಿಯನ್ನೂ ಆಯೋಗ ತನ್ನ ಸುತ್ತೋಲೆಯೊಂದಿಗೆ ಲಗತ್ತಿಸಿದ್ದು, ಮುಂದಿನ ಹಂತದ ಚುನಾವಣಾ ಸಿದ್ಧತೆಗಳಿಗೂ ಮುನ್ನೋಟ ನೀಡಿದೆ.ಈ ಬೆಳವಣಿಗೆಯೊಂದಿಗೆ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಕಾವು ಹೆಚ್ಚಾಗಿದ್ದು, ಶೀಘ್ರದಲ್ಲೇ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ನಿರೀಕ್ಷೆ ವ್ಯಕ್ತವಾಗಿದೆ.








