ನಿನ್ನೆ ( ಮೇ 28 ) ಕರ್ನಾಟಕ ರಾಜ್ಯ ರಾಜಕಾರಣದ ಪ್ರಮುಖ ದಿನಗಳಲ್ಲಿ ಒಂದು. ಹಲವು ದಿನಗಳಿಂದ ಚರ್ಚೆಗೀಡಾಗಿ ವದಂತಿ ಎಂದು ಕರೆಸಿಕೊಳ್ಳುತ್ತಿದ್ದ ಮುಖ್ಯಮಂತ್ರಿ ಬದಲಾವಣೆ ಕುರಿತ ವಿಷಯ ನಿನ್ನೆ ಸತ್ಯವಾಗಿದೆ.
ಅನ್ನರಾಮಯ್ಯ, ಕನ್ನಡರಾಮಯ್ಯ, ಕೋಮುಗಲಭೆ ವಿರೋಧಿ, ಮಾನವತಾವಾದಿ ಎಂಬ ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದ ರಾಜ್ಯ ಕಂಡ ಶ್ರೇಷ್ಟ ಅಹಿಂದ ನಾಯಕರಲ್ಲಿ ಓರ್ವರಾದ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಹಲವು ದಿನಗಳಿಂದ ಚರ್ಚೆಯಲ್ಲಿದ್ದ ಈ ವಿಷಯ ಮೊನ್ನೆ ಇದ್ದಕ್ಕಿದ್ದಂತೆ ದೊಡ್ಡ ಮಟ್ಟದಲ್ಲಿ ಮುನ್ನೆಲೆಗೆ ಬಂದ ಈ ವಿಷಯ ಈ ಬಾರಿ ಸಿದ್ದರಾಮಯ್ಯ ಪದತ್ಯಾಗ ಪಕ್ಕಾ ಎಂದು ಹೇಳಲಾಗುತ್ತಿತ್ತು. ಅದರಂತೆ ನಿನ್ನೆ ರಾಜೀನಾಮೆ ಕೊಟ್ಟ ಸಿದ್ದರಾಮಯ್ಯ ಹೈಕಮಾಂಡ್ ಸೂಚನೆಯಂತೆ ರಾಜೀನಾಮೆ ಕೊಟ್ಟಿದ್ದೇನೆ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ ಹೊರತು ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ, ಯಾವುದೇ ಕಾರಣಕ್ಕೂ ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ, ಕೋಮುವಾದದ ವಿರುದ್ಧ ರಾಜ್ಯದಲ್ಲಿ ಹೋರಾಟ ಮುಂದುವರಿಸುತ್ತೇನೆ ಎಂದರು.
ಹೀಗೆ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಆಯಾಮಗಳಲ್ಲಿ ಚರ್ಚೆಗಳು ನಡೆಯುತ್ತಿದ್ದು, ಕೆಲವೊಂದಷ್ಟು ಮಂದಿ ಒಂದೇ ತಿಂಗಳಲ್ಲಿ ನಾಲ್ಕು ಮಂದಿ ಆರ್ಎಸ್ಎಸ್ ವಿರೋಧಿ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಂಡರು ಎಂದು ಬರೆದುಕೊಂಡಿದ್ದಾರೆ.
ಹೌದು, ಆಶ್ಚರ್ಯವಾದರೂ, ನಂಬಲಸಾಧ್ಯವಾದರೂ ಇದು ಸತ್ಯ, ಮೇ ತಿಂಗಳಲ್ಲೇ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಎಂಕೆ ಸ್ಟಾಲಿನ್, ಕೇರಳ ಸಿಎಂ ಆಗಿದ್ದ ಪಿಣರಾಯಿ ವಿಜಯನ್, ಪಶ್ಚಿಮ ಬಂಗಾಳದ ಸಿಎಂ ಆಗಿದ್ದ ಮಮತಾ ಬ್ಯಾನರ್ಜಿ ಹಾಗೂ ಕರ್ನಾಟಕದ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಗಳಿಗೆ ರಾಜೀನಾಮೆ ಕೊಟ್ಟಿದ್ದಾರೆ.
ಇನ್ನು ಈ ನಾಲ್ವರೂ ಸಹ ಆರ್ಎಸ್ಎಸ್ ಸಂಘಟನೆ ಹಾಗೂ ಅದರ ತತ್ವ ಮತ್ತು ಸಿದ್ಧಾಂತಗಳನ್ನು ಈ ಹಿಂದಿನಿಂದಲೂ ವಿರೋಧಿಸುತ್ತಾ ಬಂದವರು. ಹೀಗೆ ಆರ್ಎಸ್ಎಸ್ ವಿರೋಧಿಸಿದ ನಾಲ್ವರು ಒಂದೇ ತಿಂಗಳು ರಾಜೀನಾಮೆ ನೀಡಿ ಅಧಿಕಾರ ಕಳೆದುಕೊಂಡಿದ್ದನ್ನು ಆರ್ಎಸ್ಎಸ್ ಸಿದ್ಧಾಂತ ಬೆಂಬಲಿಗರು ಖುಷಿಯಿಂದ ಸಂಭ್ರಮಿಸಿದರೆ, ಆರ್ಎಸ್ಎಸ್ ವಿರೋಧಿಗಳು ಹೆಚ್ಚು ಖುಷಿಪಡಬೇಡಿ ಬಂಗಾಳ ಹೊರತುಪಡಿಸಿ ಉಳಿದೆಲ್ಲೆಡೆ ಮುಖ್ಯಮಂತ್ರಿ ಬದಲಾವಣೆಯಾದರೂ ಆರ್ಎಸ್ಎಸ್ ವಿರೋಧಿಸುವುದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದಿದ್ದಾರೆ.

