ಪಾಕಿಸ್ತಾನದ ಭಯೋತ್ಪಾದನಾ ನೀತಿಗಳನ್ನು ಜಾಗತಿಕವಾಗಿ ಬಯಲು ಮಾಡಲು ವಿದೇಶಕ್ಕೆ ತೆರಳಿದ್ದ ಭಾರತದ ಸರ್ವಪಕ್ಷ ನಿಯೋಗದ ಸದಸ್ಯರು, ಅಲ್ಲಿ ಮನರಂಜನೆಯಲ್ಲಿ ತೊಡಗಿರುವ ವೀಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯಸಭಾ ಸದಸ್ಯೆ ರೇಖಾ ಶರ್ಮಾ ಅವರು ಬಾಲಿವುಡ್ ಹಾಡೊಂದನ್ನು ಹಾಡುತ್ತಿದ್ದರೆ, ಇತರೆ ನಿಯೋಗದ ಸದಸ್ಯರು ಚಪ್ಪಾಳೆ ತಟ್ಟಿ, ನಗುತ್ತಾ ಸಂಭ್ರಮಿಸುತ್ತಿರುವ ದೃಶ್ಯಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿವೆ.
ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದ ಈ ನಿಯೋಗದಲ್ಲಿ ಬಿಜೆಪಿ ಸಂಸದರಾದ ನಿಶಿಕಾಂತ್ ದುಬೆ, ಫಂಗ್ನೋನ್ ಕೊನ್ಯಾಕ್, ಸತ್ನಂ ಸಿಂಗ್ ಸಂಧು, ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ, ಗುಲಾಂ ನಬಿ ಆಜಾದ್ ಮತ್ತು ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಇದ್ದಾರೆ. ಪಾಕಿಸ್ತಾನದ ಕುರಿತು ಭಾರತದ ನಿಲುವನ್ನು ವಿಶ್ವದ ಮುಂದೆ ಮಂಡಿಸಲು “ಆಪರೇಷನ್ ಸಿಂಧೂರ್” ಅಡಿಯಲ್ಲಿ ಈ ನಿಯೋಗಗಳನ್ನು ವಿವಿಧ ದೇಶಗಳಿಗೆ ಕಳುಹಿಸಲಾಗಿದೆ.
ವೈರಲ್ ವೀಡಿಯೋವನ್ನು ಉಲ್ಲೇಖಿಸಿ, ಅನೇಕ ನೆಟ್ಟಿಗರು “ಭಯೋತ್ಪಾದನೆಯ ಬಗ್ಗೆ ಸಂದೇಶ ಸಾರಲು ವಿದೇಶ ಪ್ರವಾಸಕ್ಕೆ ತೆರಳಿದ ನಿಯೋಗವು ತೆರಿಗೆದಾರರ ಹಣದಲ್ಲಿ ಹಾಡು ಹೇಳಿ, ಪಾರ್ಟಿ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸಂಸದರನ್ನು ಇಂತಹ ಆಡಂಬರದಲ್ಲಿ ತೊಡಗಿಸಿಕೊಳ್ಳಲು ವಿದೇಶಕ್ಕೆ ಕಳುಹಿಸಲಾಗಿತ್ತೇ?” ಮತ್ತು “ಅವರು ಪಿಕ್ನಿಕ್‌ಗೆ ಹೋಗಿದ್ದಾರಾ?” ಎಂಬ ಪ್ರಶ್ನೆಗಳನ್ನು ನೆಟ್ಟಿಗರು ಕೇಳುತ್ತಿದ್ದಾರೆ.
ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ಕೂಡ ಈ ವೀಡಿಯೊವನ್ನು ಹಂಚಿಕೊಂಡಿದ್ದು, ಭಯೋತ್ಪಾದನೆಯಂತಹ ಗಂಭೀರ ವಿಷಯಗಳ ಬಗ್ಗೆ ಗಮನಹರಿಸುವ ಬದಲು ಮನರಂಜನೆಯಲ್ಲಿ ತೊಡಗಿದ್ದರೆ ನಿಯೋಗದ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ. ಬೈಜಯಂತ್ ಪಾಂಡಾ ನೇತೃತ್ವದ ನಿಯೋಗ ಸೌದಿ ಅರೇಬಿಯಾ, ಕುವೈತ್, ಬಹ್ರೇನ್ ಮತ್ತು ಅಲ್ಜೀರಿಯಾ ಸೇರಿದಂತೆ ಹಲವು ದೇಶಗಳಿಗೆ ಭೇಟಿ ನೀಡಿ, ಭಾರತದ ನಿಲುವು ಮತ್ತು ಆಪರೇಷನ್ ಸಿಂಧೂರ್‌ನ ವಿವರಗಳನ್ನು ವಿದೇಶಿ ಸರ್ಕಾರಗಳಿಗೆ ತಿಳಿಸಿದೆ. ಆದರೆ, ಇಂತಹ ವೀಡಿಯೊಗಳು ನಿಯೋಗದ ಗಂಭೀರ ಉದ್ದೇಶದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

