ಬಾಲಿವುಡ್ ನಟಿ ಸೋನಮ್ ಕಪೂರ್ ಮತ್ತು ಅವರ ಉದ್ಯಮಿ ಪತಿ ಆನಂದ್ ಅಹುಜಾ ಲಂಡನ್‌ನಲ್ಲಿ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ಲಂಡನ್‌ನ ಪ್ರತಿಷ್ಠಿತ ನಾಟಿಂಗ್ ಹಿಲ್ ಪ್ರದೇಶದಲ್ಲಿ ಈ ದಂಪತಿ ಖರೀದಿಸಿರುವ ಐಷಾರಾಮಿ ಫ್ಲ್ಯಾಟ್‌ಗಳ ವಿಚಾರವಾಗಿ ಅಲ್ಲಿನ ಸ್ಥಳೀಯ ನಿವಾಸಿಗಳು ಮತ್ತು ಇವರ ನಡುವೆ ತೀವ್ರ ಭಿನ್ನಾಭಿಪ್ರಾಯ ಶುರುವಾಗಿದೆ.
ಬ್ರಿಟಿಷ್ ಮಾಧ್ಯಮಗಳ ವರದಿಯ ಪ್ರಕಾರ, ಸೋನಮ್ ಕಪೂರ್ ದಂಪತಿಗೆ ಸಂಬಂಧಿಸಿದ ಕಂಪನಿಯೊಂದು ನಾಟಿಂಗ್ ಹಿಲ್‌ನಲ್ಲಿರುವ ‘ಹಿಲ್‌ಕ್ರೆಸ್ಟ್’ ಎಂಬ ಬಹುಮಹಡಿ ಕಟ್ಟಡದಲ್ಲಿ ಸುಮಾರು ೪ ಮಿಲಿಯನ್ ಪೌಂಡ್ (ಅಂದಾಜು ೫೧.೪ ಕೋಟಿ ರೂಪಾಯಿ) ವೆಚ್ಚದಲ್ಲಿ ೫ ಫ್ಲ್ಯಾಟ್‌ಗಳನ್ನು ಖರೀದಿಸಿದೆ. ಈ ಅಪಾರ್ಟ್‌ಮೆಂಟ್‌ಗಳನ್ನು ತಮ್ಮ ಬಂಗಲೆಯ ನೌಕರರ ವಸತಿಗಾಗಿ (ಸರ್ವೆಂಟ್ ಕ್ವಾರ್ಟರ್ಸ್) ಬಳಸಲು ದಂಪತಿ ಯೋಜಿಸುತ್ತಿದ್ದಾರೆ ಎಂದು ನೆರೆಹೊರೆಯವರು ಆರೋಪಿಸಿದ್ದಾರೆ.
ಸ್ಥಳೀಯ ನಿವಾಸಿಗಳ ಆತಂಕಕ್ಕೆ ಕಾರಣವೇನು? ಅಹುಜಾ ಕುಟುಂಬದ ಒಡೆತನದ ‘ಶಾಹಿ ಎಕ್ಸ್‌ಪೋರ್ಟ್ಸ್’ ಕಂಪನಿಯು ಈ ಕಟ್ಟಡದಲ್ಲಿ ಹೆಚ್ಚಿನ ಸಂಖ್ಯೆಯ ಫ್ಲ್ಯಾಟ್‌ಗಳು ಹಾಗೂ ಗ್ಯಾರೇಜ್ ಜಾಗವನ್ನು ಖರೀದಿಸುತ್ತಿರುವುದು ಅಪಾರ್ಟ್‌ಮೆಂಟ್‌ನ ಇತರ ಮಾಲೀಕರಲ್ಲಿ ಆತಂಕ ಮೂಡಿಸಿದೆ. ಕಟ್ಟಡದ ಬಹುಪಾಲು ಮಾಲೀಕತ್ವ ಇವರ ಕೈ ಸೇರಿದರೆ, ಮುಂದಿನ ದಿನಗಳಲ್ಲಿ ಅಪಾರ್ಟ್‌ಮೆಂಟ್‌ನ ನಿರ್ವಹಣಾ ನಿರ್ಧಾರಗಳು ಮತ್ತು ನವೀಕರಣದ ನಿಯಮಗಳಲ್ಲಿ ಇವರದ್ದೇ ಮೇಲುಗೈ ಆಗಬಹುದು ಎಂಬುದು ಸ್ಥಳೀಯರ ಭಯವಾಗಿದೆ.
ಶ್ರೀಮಂತರ ವಿರುದ್ಧ ಮಾತನಾಡಲು ನಿವಾಸಿಗಳ ಹೆದರಿಕೆ! ದಂಪತಿಯ ಆರ್ಥಿಕ ಮತ್ತು ಸಾಮಾಜಿಕ ಪ್ರಭಾವಕ್ಕೆ ಹೆದರಿ ತಮಗೆ ಬಹಿರಂಗವಾಗಿ ಮಾತನಾಡಲು ಭಯವಾಗುತ್ತಿದೆ ಎಂದು ಕೆಲವು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಬಿಲಿಯನೇರ್‌ಗಳ ವಿರುದ್ಧ ಧ್ವನಿ ಎತ್ತಿದರೆ ಕೋರ್ಟ್ ಕೇಸ್ ಹಾಕಬಹುದು ಅಥವಾ ಈ ಫ್ಲ್ಯಾಟ್‌ಗಳನ್ನು ಸಾಮಾಜಿಕ ವಸತಿಗಾಗಿ (ಸೋಷಿಯಲ್ ಹೌಸಿಂಗ್) ಬಿಟ್ಟುಕೊಡುವುದಾಗಿ ಖಾಸಗಿ ಮಾತುಕತೆಗಳ ವೇಳೆ ಬೆದರಿಕೆ ಹಾಕಲಾಗಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಇನ್ನೊಂದೆಡೆ, ಸೋನಮ್ ಮತ್ತು ಆನಂದ್ ೨೦೨೩ ರಲ್ಲಿ ಇದೇ ಪ್ರದೇಶದಲ್ಲಿ ೨೦೦ ವರ್ಷಗಳಷ್ಟು ಹಳೆಯದಾದ ಬೃಹತ್ ಬಂಗಲೆಯನ್ನು ೨೧ ಮಿಲಿಯನ್ ಪೌಂಡ್‌ಗೆ ಖರೀದಿಸಿದ್ದರು. ಈ ಬಂಗಲೆಯ ಹೊರಗಿನ ಗೋಡೆಗಳನ್ನು ಮಾತ್ರ ಉಳಿಸಿಕೊಂಡು, ಒಳಭಾಗದಲ್ಲಿ ಈಜುಕೊಳ ಮತ್ತು ಬಾಸ್ಕೆಟ್‌ಬಾಲ್ ಕೋರ್ಟ್ ನಿರ್ಮಿಸಲು ಮುಂದಾಗಿದ್ದರು. ಇದರ ವಿರುದ್ಧ ನಿವಾಸಿಗಳು ಕಳೆದ ಮೂರು ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದು, ಕೊನೆಗೂ ದಂಪತಿಗೆ ನವೀಕರಣಕ್ಕೆ ಅನುಮತಿ ಸಿಕ್ಕಿದೆ.
ಸೋನಮ್ ಕಪೂರ್ ದಂಪತಿ ಪರ ವಾದ ಈ ನಡುವೆ ಕೆಲವು ನಿವಾಸಿಗಳು ದಂಪತಿಯನ್ನು ಬೆಂಬಲಿಸಿದ್ದು, ಲಂಡನ್‌ನಂತಹ ಮಹಾನಗರಗಳಲ್ಲಿ ಇವೆಲ್ಲವೂ ಸಾಮಾನ್ಯ ಸಂಗತಿಗಳು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಈ ವಿವಾದಕ್ಕೆ ಸಂಬಂಧಿಸಿದಂತೆ ಸೋನಮ್ ಕಪೂರ್ ಅವರ ಪ್ರತಿನಿಧಿಗಳು ಸ್ಪಷ್ಟನೆ ನೀಡಿದ್ದು, ಫ್ಲ್ಯಾಟ್‌ಗಳನ್ನು ಖರೀದಿಸಿದ ಕಂಪನಿಯಲ್ಲಿ ಸೋನಮ್ ಅವರಿಗೆ ಯಾವುದೇ ನೇರ ಪಾತ್ರವಿಲ್ಲ ಮತ್ತು ಇದನ್ನು ಕೇವಲ ಹೂಡಿಕೆಯ ಉದ್ದೇಶದಿಂದ ಖರೀದಿಸಲಾಗಿದೆ ಎಂದು ತಿಳಿಸಿದ್ದಾರೆ.

