ಯಾದಗಿರಿ: ಆಸ್ತಿ ವಿಚಾರಕ್ಕೆ ಪುತ್ರನೊಬ್ಬ 2.50 ಲಕ್ಷ ರೂ. ಸುಪಾರಿ ನೀಡಿ ತಂದೆಯನ್ನೇ ಕೊಲೆ ಮಾಡಿಸಿದ ಘಟನೆ ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿ ಪುತ್ರ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಹಂಪಣ್ಣ ಸಜ್ಜನ ಕೊಲೆಯಾದವರು. ಕೊಲೆಗೆ ಸುಪಾರಿ ನೀಡಿದ್ದ ಅವರ ಪುತ್ರ ನರಸರೆಡ್ಡಿ ಸಜ್ಜನ(48) ಮತ್ತು ಆರೋಪಿಗಳಾದ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ರಮೇಶ ನರಸಪ್ಪ(32), ಜಿ. ವೀರೇಶ(40), ಕೃಷ್ಣ(28), ಎಂ. ವೀರೇಶ(26) ಅವರನ್ನು ಬಂಧಿಸಲಾಗಿದೆ.
ಕೊಲೆಗೈದ ನಾಲ್ವರು ಆರೋಪಿಗಳು ಈ ಹಿಂದೆ ಹಂಪಣ್ಣನವರ ಜಮೀನಿಗೆ ಕೆಲಸಕ್ಕಾಗಿ ಬಂದಿದ್ದರು. ಮಹಿಳೆಯರ ಜೊತೆಗೆ ಹಂಪಣ್ಣ ಅನುಚಿತವಾಗಿ ವರ್ತಿಸಿದ್ದ. ಹಳೆ ವೈಷಮ್ಯ ಇರಿಸಿಕೊಂಡಿದ್ದ ಆರೋಪಿಗಳು ಸುಪಾರಿ ಪಡೆದು ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.

