HomeKarnatakaFACT CHECK : ಸೋಮಲಾಪುರ ಕಾಯ್ದಿಟ್ಟ ಅರಣ್ಯ ಜಮೀನು ಖರಾಬು ಆಗಿಲ್ಲ: ಅರಣ್ಯ ಹಾಗೂ ಕಂದಾಯ...

FACT CHECK : ಸೋಮಲಾಪುರ ಕಾಯ್ದಿಟ್ಟ ಅರಣ್ಯ ಜಮೀನು ಖರಾಬು ಆಗಿಲ್ಲ: ಅರಣ್ಯ ಹಾಗೂ ಕಂದಾಯ ಇಲಾಖೆ ಸ್ಪಷ್ಟನೆ

ಬಳ್ಳಾರಿ : ಸೋಮಲಾಪುರ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ನಿಯಮಬಾಹಿರವಾಗಿ ಖರಾಬು ಜಮೀನನ್ನಾಗಿ ಪರಿವರ್ತಿಸಿದ್ದಾರೆ ಎಂದು ಖಾಸಗಿ ವಾಹಿನಿಯೊಂದು ಪ್ರಸಾರ ಮಾಡಿರುವ ಸುದ್ದಿ ಸಂಪೂರ್ಣ ಸತ್ಯಕ್ಕೆ ದೂರವಾದದ್ದು ಹಾಗೂ ನಿರಾಧಾರವಾದದ್ದು ಎಂದು ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

1890ರಲ್ಲೇ ಕಾಯ್ದಿಟ್ಟ ಅರಣ್ಯ ಘೋಷಣೆ ಸೋಮಲಾಪುರ ಕಾಯ್ದಿಟ್ಟ ಅರಣ್ಯವನ್ನು ಅಧಿಸೂಚನೆ ಸಂಖ್ಯೆ 226ರ ಅನ್ವಯ ದಿನಾಂಕ 18.04.1890 ರಂದೇ ಅಧಿಕೃತವಾಗಿ ಕಾಯ್ದಿಟ್ಟ ಅರಣ್ಯವೆಂದು ಘೋಷಿಸಲಾಗಿದೆ. ಇದು ಒಟ್ಟು 2393.88 ಎಕರೆ (968.77 ಹೆಕ್ಟೇರ್) ವಿಸ್ತೀರ್ಣವನ್ನು ಹೊಂದಿದ್ದು, ಮೂರು ಗ್ರಾಮಗಳ ವಿವಿಧ ಸರ್ವೆ ನಂಬರ್‌ಗಳನ್ನು ಒಳಗೊಂಡಿದೆ. ಪ್ರಸ್ತುತ ಸದರಿ ಜಮೀನು ಸಂಪೂರ್ಣವಾಗಿ ಅರಣ್ಯ ಇಲಾಖೆಯ ವಶದಲ್ಲೇ ಇದೆ.

ಸೋಮಲಾಪುರ ಗ್ರಾಮದ ಸ.ನಂ. 1, 165/ಎ, 165/ಬಿ ಹಾಗೂ 177/ಸಿ ವ್ಯಾಪ್ತಿಯಲ್ಲಿ ಬರುವ 1096.79 ಎಕರೆ ಪ್ರದೇಶವನ್ನು ಖರಾಬು ಮಾಡಲಾಗಿದೆ ಎಂಬುದು ಮಾಧ್ಯಮದ ಆರೋಪವಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಿನಾಂಕ 2.01.2024 ರಂದು ಉಪ ವಿಭಾಗ ದಂಡಾಧಿಕಾರಿಗಳ ನ್ಯಾಯಾಲಯದ ನಿರ್ದೇಶನದಂತೆ, ಸಂಡೂರು ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಭೂಸ್ವಾಧೀನ ಹಾಗೂ ಮಂಜೂರಾದ ಪ್ರಕರಣಗಳನ್ನು ಹೊರತುಪಡಿಸಿ, ಉಳಿದ ಹಳ್ಳ, ಪರಂಪೋಕು, ಗುಡ್ಡ ಮತ್ತು ಇತರ ಖರಾಬು ಜಮೀನುಗಳು ದುರುಪಯೋಗವಾಗುವುದನ್ನು ತಡೆಯಲು ಪಹಣಿ ಕಾಲಂ 3ರ ಫೂಟ್ ಖರಾಬು ಕಾಲಂನಲ್ಲಿ ನಮೂದಿಸಲು ತಹಶೀಲ್ದಾರರಿಗೆ ಸೂಚಿಸಲಾಗಿತ್ತು.

ಈ ಪ್ರಕ್ರಿಯೆಯ ಭಾಗವಾಗಿ ಪಹಣಿ ದಾಖಲೆಗಳ ಕಾಲಂನಲ್ಲಿ ‘ಸರ್ಕಾರ ಬ ಖರಾಬು’ ಎಂದು ತಾಂತ್ರಿಕವಾಗಿ ನಮೂದಾಗಿದ್ದು, ಸ್ವಾಧೀನತೆ ರೀತಿಯ ಕಾಲಂನಲ್ಲಿ ಈ ಹಿಂದಿನಂತೆಯೇ ‘ಆರ್‌ಎಫ್ ಕಾಯ್ದಿಟ್ಟ ಅರಣ್ಯ/ಕಾಯ್ದಿರಿಸಿದ ಅರಣ್ಯ/ಅಡವಿ’ ಎಂದೇ ಮುಂದುವರಿಸಲಾಗಿತ್ತು. ಆದರೆ, ಈ ಬದಲಾವಣೆಯು ಪ್ರಸ್ತುತ ವರ್ಷದ ಪಹಣಿಯಲ್ಲಿ ಸರಿಯಾಗಿ ಬಿಂಬಿತವಾಗದೇ ಇರುವುದು ಕಂಡುಬಂದಿದೆ.

 ದಾಖಲೆಗಳ ಇಂದೀಕರಣ ಪ್ರಕ್ರಿಯೆ ಅಂತಿಮ ಹಂತದಲ್ಲಿ ಈ ತಾಂತ್ರಿಕ ಲೋಪಗಳನ್ನು ಸರಿಪಡಿಸಲು ದಿನಾಂಕ 09.03.2026 ಹಾಗೂ 21.05.2026 ರಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಬಳ್ಳಾರಿ ಸಹಾಯಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಸೋಮಲಾಪುರ ಕಾಯ್ದಿಟ್ಟ ಅರಣ್ಯದ ನಾಲ್ಕು ಸರ್ವೆ ನಂಬರ್‌ಗಳು ಸೇರಿದಂತೆ ಬಳ್ಳಾರಿ ಜಿಲ್ಲೆಯ ಒಟ್ಟು 92 ಸರ್ವೇ ನಂಬರ್‌ಗಳ ಸುಮಾರು 23,800 ಎಕರೆ (9637 ಹೆಕ್ಟೇರ್) ಅರಣ್ಯ ಪ್ರದೇಶದ ವಿವರಗಳನ್ನು ಕಂದಾಯ ಇಲಾಖೆಯ ದಾಖಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಇಂದೀಕರಣ (ಮ್ಯುಟೇಶನ್) ಮಾಡುವ ಕಾರ್ಯ ಪ್ರಸ್ತುತ ಅಂತಿಮ ಹಂತದಲ್ಲಿದೆ.

ಹಾಗಾಗಿ, ಮಾಧ್ಯಮದಲ್ಲಿ ಪ್ರಸಾರವಾದ ವರದಿಯು ಸತ್ಯಕ್ಕೆ ದೂರವಾಗಿದ್ದು, ಸಾರ್ವಜನಿಕರು ಯಾವುದೇ ಗೊಂದಲಕ್ಕೊಳಗಾಗಬಾರದು ಎಂದು ಬಳ್ಳಾರಿ ಉಪ-ವಿಭಾಗದ ಸಹಾಯಕ ಆಯುಕ್ತರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular