ಬೆಂಗಳೂರು: ‘ನಮ್ಮ ಸಮೀಕ್ಷೆ ನಮ್ಮ ಜವಾಬ್ದಾರಿ’ ಅಭಿಯಾನದಡಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆಪ್ಟಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ರಾಜ್ಯಾದ್ಯಂತ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ ಮನೆ ಮನೆಗೆ ಬಂದು ಸಮೀಕ್ಷೆ ನಡೆಸಲಾಗುವುದು. ಸಮೀಕ್ಷೆಯ ವೇಳೆ ಸುಮಾರು 60 ಪ್ರಶ್ನೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪಡಿತರ ಚೀಟಿ ಅಥವಾ ಆಧಾರ್ ಸಂಖ್ಯೆಯ ದೃಢೀಕರಣದೊಂದಿಗೆ ಸಮೀಕ್ಷೆ ನಡೆಸಲಾಗುವುದು.
ಪಡಿತರ ಚೀಟಿ, ಆಧಾರ್ ಸಂಖ್ಯೆ, ಮತದಾರರ ಗುರುತಿನ ಚೀಟಿ, ವಿಕಲಚೇತನರಾಗಿದ್ದಲ್ಲಿ ಯುಐಡಿ ಕಾರ್ಡ್ ಅಥವಾ ಪ್ರಮಾಣ ಪತ್ರಗಳನ್ನು ಸಿದ್ಧವಾಗಿಟ್ಟುಕೊಂಡಿರಬೇಕು. ಪ್ರತಿ ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಗಳು ಮೊಬೈಲ್ ನಂಬರ್ ಗೆ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಸಮೀಕ್ಷೆಯ ಸಂದರ್ಭದಲ್ಲಿ ಇ-ಕೆವೈಸಿ ಪ್ರಕ್ರಿಯೆಗೆ ಒಟಿಪಿ ಸಂಖ್ಯೆ ಬರುತ್ತದೆ. ಈ ಸಂಖ್ಯೆಯು ಸದಸ್ಯರ ಆಧಾರ್ ನಂಬರ್ ಗೆ ಜೋಡಣೆಯಾಗಿರುವ ಮೊಬೈಲ್ ಗೆ ಸಂದೇಶ ಬರುತ್ತದೆ. ಒಂದುವೇಳೆ ಆ ಸದಸ್ಯರು ಮನೆಯಲ್ಲಿ ಇಲ್ಲದಿದ್ದರೆ ಕುಟುಂಬದ ಪರವಾಗಿ ಉತ್ತರ ನೀಡುವ ಸದಸ್ಯರು ಫೋನ್ ಮೂಲಕ ಒಟಿಪಿ ಸಂಖ್ಯೆ ಪಡೆದು ಮಾಹಿತಿ ನೀಡಬೇಕಿದೆ. 6 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರ ಸದಸ್ಯರಿಗೂ ಆಧಾರ್ ಕಡ್ಡಾಯವಾಗಿದೆ. ಮೊಬೈಲ್ ನಂಬರ್ ಆಧಾರ್ ನಂಬರ್ ಗೆ ಲಿಂಕ್ ಆಗಿಲ್ಲದಿದ್ದರೆ ಅದನ್ನು ತಕ್ಷಣವೇ ಲಿಂಕ್ ಮಾಡಿಸಿಕೊಳ್ಳಬೇಕಿದೆ.
ಪ್ರಶ್ನಾವಳಿಯಲ್ಲಿ ವ್ಯಾಪಾರ, ಉದ್ಯೋಗ, ವಿದ್ಯಾರ್ಹತೆ, ಆದಾಯ, ಆಸ್ತಿ, ಧರ್ಮ, ಜಾತಿ, ಉಪಜಾತಿ, ಕುಲಕಸುಬು ಇತರೆ ಮಾಹಿತಿಗಳ ಪ್ರಶ್ನೆಗಳು ಇರುತ್ತವೆ. ಹೆಚ್ಚಿನ ಮಾಹಿತಿಗಾಗಿ ಆಯೋಗದ ಸಹಾಯವಾಣಿ ಸಂಖ್ಯೆ 8050770004, https://kscbc.karnataka.gov.in ವೆಬ್ಸೈಟ್ ಗೆ ಭೇಟಿ ನೀಡಬಹುದಾಗಿದೆ.