ದಿನನಿತ್ಯದ ಜಂಜಾಟದಿಂದ ಕೂಡಿದ ಕಾರ್ಪೊರೇಟ್ ಜೀವನದಿಂದ ದೂರವಾಗಿ ಶಾಂತಿಯುತ ಬದುಕು ಸಾಗಿಸಬೇಕು ಎಂಬುದು ಹಲವರ ಕನಸಾಗಿರುತ್ತದೆ. ಮುಂಬೈನ 29 ವರ್ಷದ ಸ್ನೇಹಾ ರಾಜಗುರು ಎಂಬ ಯುವತಿ ಈ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಮುಂಬೈನ ಬ್ಯುಸಿ ಲೈಫ್ ಮತ್ತು ಸಿನಿರಂಗದ ಕೆಲಸ ತೊರೆದು ಪುಣೆಯಲ್ಲಿ ತಮ್ಮ ತಂದೆಯೊಂದಿಗೆ ಸೇರಿ ಬಾಪ್ ಬೇಟಿ ಫಾರ್ಮ್ಸ್ ಎಂಬ ಫಾರ್ಮ್‌ಹೌಸ್ ಆರಂಭಿಸುವ ಮೂಲಕ ಅವರು ಗಮನ ಸೆಳೆದಿದ್ದಾರೆ.
ಸುಮಾರು ಎಂಟು ವರ್ಷಗಳ ಕಾಲ ಬಾಲಿವುಡ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಸ್ನೇಹಾ ಅವರಿಗೆ ನಗರದ ಯಾಂತ್ರಿಕ ಜೀವನ ಬೇಸರ ತಂದಿತ್ತು. ಜೀವನದ ನೈಜ ಅರ್ಥ ಹುಡುಕುವ ಪ್ರಯತ್ನದಲ್ಲಿ ಅವರು ಪ್ರಕೃತಿಯ ಮಡಿಲು ಸೇರಲು ನಿರ್ಧರಿಸಿದರು. 2022ರಲ್ಲಿ ಪುಣೆ ಬಳಿ ಜಮೀನು ಖರೀದಿಸಿದ ಅವರು ಅದನ್ನು ತಮ್ಮ ಕನಸಿನ ತೋಟವನ್ನಾಗಿ ಬದಲಾಯಿಸಿದರು. ಈ ಫಾರ್ಮ್‌ಹೌಸ್‌ನಲ್ಲಿ ಸದ್ಯ ಪ್ರವಾಸಿಗರಿಗೆ ತಂಗುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಕಡಿಮೆ ವಯಸ್ಸಿನಲ್ಲಿಯೇ ಕೃಷಿಯತ್ತ ಒಲವು ತೋರಿ ನಿವೃತ್ತಿ ಜೀವನ ಆರಂಭಿಸಲು ನಾಲ್ಕು ಮುಖ್ಯ ಹಂತಗಳನ್ನು ಸ್ನೇಹಾ ಹಂಚಿಕೊಂಡಿದ್ದಾರೆ.
ಮೊದಲನೆಯದಾಗಿ ನಮಗೆ ಆಪ್ತವೆನಿಸುವ ಹೆಸರಿನಲ್ಲಿ ಸಣ್ಣ ಜಮೀನು ಖರೀದಿಸುವುದು. ಎರಡನೆಯದಾಗಿ ಕಡಿಮೆ ಶ್ರಮದಲ್ಲಿ ದೀರ್ಘಕಾಲ ಫಲ ನೀಡುವ ಹಣ್ಣಿನ ಗಿಡಗಳನ್ನು ನೆಡುವುದು. ಮೂರನೆಯದಾಗಿ ಸ್ವಾವಲಂಬನೆಗಾಗಿ ಅಗತ್ಯವಿರುವ ತರಕಾರಿ ಮತ್ತು ಆಹಾರ ಧಾನ್ಯಗಳನ್ನು ನಾವೇ ಬೆಳೆದುಕೊಳ್ಳುವುದು. ಇದರಿಂದ ಯಾವುದೇ ತುರ್ತು ಪರಿಸ್ಥಿತಿ ಬಂದರೂ ಇತರರ ಮೇಲೆ ಅವಲಂಬಿತರಾಗುವುದು ತಪ್ಪುತ್ತದೆ. ನಾಲ್ಕನೆಯದಾಗಿ ಮಾನಸಿಕ ಶಾಂತಿಗಾಗಿ ಜಮೀನಿನ ಸುತ್ತಲೂ ಸುಂದರ ಹೂವಿನ ಗಿಡಗಳನ್ನು ಬೆಳೆಸುವುದು. ದಿನನಿತ್ಯ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುವುದರಿಂದ ಆರೋಗ್ಯ ಮತ್ತು ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂಬುದು ಅವರ ಅಭಿಪ್ರಾಯ.
ನಿವೃತ್ತಿ ಎಂಬುದು ವಯಸ್ಸಿಗೆ ಸಂಬಂಧಿಸಿದ್ದಲ್ಲ, ಅದು ಒತ್ತಡದ ಬದಲು ಶಾಂತಿಯನ್ನು ಆಯ್ಕೆ ಮಾಡಿಕೊಳ್ಳುವ ನಿರ್ಧಾರ ಎಂದು ಸ್ನೇಹಾ ಹೇಳುತ್ತಾರೆ. ಇನ್ನು ಮುಂಬೈನ ಚಿತ್ರರಂಗವನ್ನು ತೊರೆದಿದ್ದರೂ ಸಿನಿಮಾ ಪ್ರೀತಿಯನ್ನು ಬಿಡದ ಅವರು, ಪ್ರಕೃತಿಯ ಮಡಿಲಲ್ಲಿದ್ದುಕೊಂಡೇ ಸ್ವತಃ ಹೊಸ ಪ್ರಾಜೆಕ್ಟ್ ಒಂದನ್ನು ರೂಪಿಸುತ್ತಿದ್ದಾರೆ. ಸ್ನೇಹಾ ಅವರ ಈ ಸಾಹಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

